ಸೆ. 15ರಂದು ರಾಷ್ಟ್ರವ್ಯಾಪಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಆಚರಣೆ

ಕಲಬುರಗಿ, ಸೆ. 8: ಸೃಷ್ಟಿಕರ್ತ ಸಾಕ್ಷಾತ್ ಪರಮೇಶ್ವರನ ಉಗ್ರ ರೂಪವೇ ಆಗಿರುವ, ಭಕ್ತರ ಪ್ರಿಯ ಶ್ರೀ ವೀರಭದ್ರೇಶ್ವರ ದೇವರು ದಕ್ಷ ಬ್ರಹ್ಮನನ್ನು ಸಂಹರಿಸಲು ಶಿವನ ಜಡೆಯಿಂದ ಭೂಮಿಯ ಮೇಲೆ ಉದ್ಭವಿಸಿದ ಪವಿತ್ರ ದಿನವಾದ ಭಾದ್ರಪದ ಮಾಸದ ಮೊದಲ ಮಂಗಳವಾರವನ್ನು ಪ್ರತಿವರ್ಷ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನಾಗಿ ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನೆಯ ವೇದಿಕೆ ಕರೆ ನೀಡಿದೆ.
ಈ ಕುರಿತು ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರಗಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ಮಠ ಹಾಗೂ ಜಗದ್ಗುರು ಪಂಚಪೀಠ ವಾರ್ತಾಧಿಕಾರಿ ಸಿದ್ದರಾಮಪ್ಪ ಆಲಗೂಡಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಶ್ರೀ ವೀರಭದ್ರೇಶ್ವರ ದೇವಾಲಯಗಳಿದ್ದು, ಕೋಟ್ಯಂತರ ಜನರು ದೇವರ ಭಕ್ತರಾಗಿದ್ದಾರೆ. ಆದರೆ ಪ್ರತಿವರ್ಷ ದೇವಾಲಯಗಳಲ್ಲಿ ವೀರಭದ್ರೇಶ್ವರ ಜಾತ್ರೆಗಳನ್ನು ಮಾತ್ರ ಆಚರಿಸಲಾಗುತ್ತಿದ್ದು, ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಸಮರ್ಪಕವಾಗಿ ಆಚರಿಸಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಲ್ಲೆಡೆ ಜಯಂತಿ ಆಚರಣೆಗೆ ಕರೆ
ಎಲ್ಲ ದೇವಾಧಿದೇವತೆಗಳ ಹಬ್ಬಗಳನ್ನು ಆಚರಿಸುವಂತೆ ಈ ವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರವಾದ ಸೆಪ್ಟೆಂಬರ್ 15ರಂದು ಶ್ರೀ ವೀರಭದ್ರೇಶ್ವರ ದೇವರು ಭೂಮಿಯ ಮೇಲೆ ಉದ್ಭವಿಸಿದ ದಿನವನ್ನು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನಾಗಿ ಆಚರಿಸಬೇಕು ಎಂದು ಕರೆ ನೀಡಲಾಗಿದೆ.
ದೇಶದಾದ್ಯಂತ ಇರುವ ಶ್ರೀ ವೀರಭದ್ರೇಶ್ವರ ದೇವಾಲಯಗಳು, ಮಠಗಳು ಹಾಗೂ ಭಕ್ತರ ಮನೆಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಜಯಂತ್ಯೋತ್ಸವವನ್ನು ಭಕ್ತಿಭಾವದಿಂದ ಆಚರಿಸುವ ಮೂಲಕ ಶ್ರೀ ವೀರಭದ್ರೇಶ್ವರರ ಮಹತ್ವವನ್ನು ಸಾರಬೇಕು ಎಂದು ಸಮಿತಿ ಮನವಿ ಮಾಡಿದೆ.



