ಶಿಕ್ಷಣ

ಕನಕದಾಸರ ವ್ಯಕ್ತಿತ್ವದ ಬಹುಮುಖ ಆಯಾಮಗಳನ್ನು ಅರಿಯಬೇಕು: ಡಾ. ಶಿವರಂಜನ ಸತ್ಯಂಪೇಟೆ

ಕನಕ ದರ್ಶನ ವಿಶೇಷ ಉಪನ್ಯಾಸದಲ್ಲಿ ಸಂತ ಕವಿಯ ಸಮಾಜ ಸುಧಾರಕ ಚಿಂತನೆಗಳ ಅನಾವರಣ

ಕಲಬುರಗಿ, ಆ.5: ಒಬ್ಬ ಪಾಳೆಗಾರನ ಮನೆಯಲ್ಲಿ ಜನಿಸಿದ ಕನಕ ನಾಯಕನು ಜೀವನದ ವಿವಿಧ ಅನುಭವಗಳ ಮೂಲಕ ಕನಕದಾಸನಾಗಿ ರೂಪುಗೊಂಡ ಪಯಣವನ್ನು ಅರ್ಥೈಸಿಕೊಂಡರೆ, ಅವರು ಕೇವಲ ಭಕ್ತ ಅಥವಾ ದಾರ್ಶನಿಕರಷ್ಟೇ ಅಲ್ಲ, ಸಮಾಜ ಸುಧಾರಕರಾಗಿಯೂ ಗುರುತಿಸಬೇಕಾದ ಮಹಾನ್ ವ್ಯಕ್ತಿತ್ವ ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ “ಕನ್ನಡದ ಸಂತ ಕವಿ ಕನಕದಾಸರು” ವಿಷಯದ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಸಮಗ್ರವಾಗಿ ಗುರುತಿಸಿ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಅವರ ಸಾಹಿತ್ಯ, ತತ್ವಚಿಂತನೆ ಮತ್ತು ಸಾಮಾಜಿಕ ಸಂದೇಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಅವರು ನೀಡಿದ ಸಂದೇಶಗಳು ಕಾಲಾತೀತ ಮೌಲ್ಯಗಳನ್ನು ಹೊಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ತಿರುಪತಿ ಹತ್ತಿಕಟಗಿ ಮಾತನಾಡಿ, ಸಮಾಜಕ್ಕೆ ಅಂಟಿಕೊಂಡಿದ್ದ ಮೂಢನಂಬಿಕೆ ಹಾಗೂ ಗೊಡ್ಡ ಸಂಪ್ರದಾಯಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಿದ ಕನಕದಾಸರು ಜೀವನದಲ್ಲಿ ಅನೇಕ ಕಷ್ಟ-ನೋವುಗಳನ್ನು ಎದುರಿಸಿ ದಾರ್ಶನಿಕರಾಗಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ಜ್ಞಾನದ ಆಳ, ಜೀವನದರ್ಶನ ಮತ್ತು ಸಾಮಾಜಿಕ ಚಿಂತನೆಗಳನ್ನು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ್ ನಾಗೂರ ಅಧ್ಯಕ್ಷತೆ ವಹಿಸಿದ್ದರು.

ಪ್ರಜ್ಞಾ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ್ ಮರತೂರ, ಸಮಾಜ ಸೇವಕ ಹಾಗೂ ವಕೀಲ ಹಣಮಂತರಾವ ಅಟ್ಟೂರ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂದೀಪ್ ದೇಸಾಯಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಪಾಟ್ನಾ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಪಟ್ಟಣಕರ ಸ್ವಾಗತಿಸಿದರು. ಡಿ.ಪಿ. ಸಜ್ಜನ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button