ಕಲಾಕೃತಿಗಳಲ್ಲಿ ಪ್ರಾದೇಶಿಕ ಅಸ್ಮಿತೆ ಅತ್ಯಗತ್ಯ: ಚಂದ್ರಹಾಸ ಜಾಲಿಹಾಳ
ಪ್ರಾದೇಶಿಕ ಸಂಸ್ಕೃತಿ, ಜನಪದ ಮತ್ತು ಜೀವನಶೈಲಿ ಕಲೆಯಲ್ಲಿ ಪ್ರತಿಫಲಿಸಬೇಕು; ಕವಿತಾ ಕಟ್ಟೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಕಲಬುರಗಿ, ಜು.29: ಯಾವುದೇ ಪ್ರದೇಶದ ಭಾಷೆ, ಸಂಪ್ರದಾಯ, ಜನಪದ, ಉಡುಪು, ಜೀವನಶೈಲಿ, ವಿಚಾರಗಳು ಹಾಗೂ ಅನುಭವಗಳನ್ನು ಕಲಾಕೃತಿಗಳಲ್ಲಿ ಜೀವಂತವಾಗಿ ಮೂಡಿಸಿದಾಗ ಮಾತ್ರ ಆ ಕೃತಿಯಲ್ಲಿ ಪ್ರಾದೇಶಿಕ ಅಸ್ಮಿತೆ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಹಿರಿಯ ಚಿತ್ರಕಲಾವಿದ ಚಂದ್ರಹಾಸ ಜಾಲಿಹಾಳ ಹೇಳಿದರು.
ನಗರದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಕಲಾವಿದೆ ಕವಿತಾ ಎಸ್. ಕಟ್ಟೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕವಿತಾ ಎಸ್. ಕಟ್ಟೆ ಅವರ ಕಲಾಕೃತಿಗಳಲ್ಲಿ ಅವರು ಬೆಳೆದ ಗ್ರಾಮೀಣ ಬದುಕಿನ ನೆನಪುಗಳು, ಕೌದಿ, ಬೀಸುವ ಕಲ್ಲು, ತೊಟ್ಟಿಲು, ಅಡಕೆ ಗಡಿಗೆಗಳಂತಹ ಗ್ರಾಮೀಣ ವಸ್ತುಗಳು, ಜನಪದ ಸಂಸ್ಕೃತಿ ಹಾಗೂ ಜೀವನಾನುಭವಗಳು ಅತ್ಯಂತ ಸಹಜವಾಗಿ ಮೂಡಿಬಂದಿವೆ. ಅವರ ಕಲೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ವೈಶಿಷ್ಟ್ಯಗಳು ಮತ್ತು ಸ್ತ್ರೀ ಸಂವೇದನೆಗಳು ಸ್ಪಷ್ಟವಾಗಿ ಪ್ರತಿಫಲಿಸುತ್ತವೆ ಎಂದು ಹೇಳಿದರು.
ಭಾರತದ ಖ್ಯಾತ ಸಮಕಾಲೀನ ಕಲಾವಿದ ಜಿ.ಆರ್. ಈರಣ್ಣ ಅವರೂ ತಮ್ಮ ಕಲಾಕೃತಿಗಳ ಮೂಲಕ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.
ದಿ ಆರ್ಟ್ ಇಂಟಿಗ್ರೇಷನ್ ಸಂಸ್ಥೆಯ ನಿರ್ದೇಶಕಿ ನೀಲಮ್ಮ ಬೆಳಮಗಿ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆಯೂ ಜನಪದ ವಸ್ತುಗಳು ಹಾಗೂ ಗ್ರಾಮೀಣ ಬದುಕನ್ನು ಕವಿತಾ ಅವರ ಕಲಾಕೃತಿಗಳು ಮನಮುಟ್ಟುವಂತೆ ಬಿಂಬಿಸುತ್ತಿದ್ದು, ಬಾಲ್ಯದ ನೆನಪುಗಳನ್ನು ಮರುಕಳಿಸುತ್ತವೆ ಎಂದು ಹೇಳಿದರು.
ಚಿತ್ರಕಲಾವಿದ ಬಸವರಾಜ್ ವಿ. ಕಮಾಜಿ ಹಾಗೂ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನಪದ ಕಸೂತಿ ಕಲಾವಿದೆಯರಾದ ಇಂದುಬಾಯಿ ಕಟ್ಟೆ ಮತ್ತು ಗೋದೂಬಾಯಿ ಬುಜುರ್ಕೆ ಅವರನ್ನು ಸನ್ಮಾನಿಸಲಾಯಿತು. ಕಲಾವಿದೆ ಕವಿತಾ ಎಸ್. ಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದರಾದ ವಿ.ಬಿ. ಬಿರಾದಾರ, ವೀರೇಂದ್ರ ಶಾಹ, ಅಶೋಕ್ ಶೆಟಗಾರ, ರಾಜಕುಮಾರ್ ಕಾಳೆ, ಜಿತೇಂದ್ರ ಕೋತಳೀಕರ, ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ನಾಗರಾಜ ಕುಲಕರ್ಣಿ, ಜಲಜಾಕ್ಷಿ ಕುಲಕರ್ಣಿ, ಗೋಪಾಲ್ ಕೆ.ಪಿ., ವಿಜಯ ಓರಾದ, ಸುರೇಶ್ ಸಿ.ಎಂ., ಪ್ರಶಾಂತಕುಮಾರ್ ಜಿ. ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಮುಗುಳಿ ಸ್ವಾಗತಿಸಿದರು. ಬಿ.ಎನ್. ಪಾಟೀಲ ನಿರೂಪಿಸಿ, ಹಣಮಂತ ಬಾಡದ ವಂದಿಸಿದರು.



