ಪ್ರತಿ ಗ್ರಾಮ ಪಂಚಾಯಿತಿಗೆ ಆಧಾರ್ ಕೇಂದ್ರ ಸ್ಥಾಪನೆಗೆ ಆಗ್ರಹ

ಜೆವರ್ಗಿ, ಸೆ.18: ತಾಲ್ಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಕ್ಕೊಂದು ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಬೇಕು ಎಂದು ಡಾ. ವಿಷ್ಣು ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜೆವರ್ಗಿ ಹಾಗೂ ಯಡ್ರಾಮಿ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಿದೆ. ಆದರೆ ಜೆವರ್ಗಿ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿ, ಎಸ್ಬಿಐ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಒಟ್ಟು ಮೂರು ಆಧಾರ್ ನೋಂದಣಿ ಕೇಂದ್ರಗಳಿದ್ದವು. ಅಂಚೆ ಕಚೇರಿಯಲ್ಲಿದ್ದ ಆಧಾರ್ ಕೇಂದ್ರವೂ ಸುಮಾರು 10–12 ದಿನಗಳಿಂದ ಬಂದ್ ಆಗಿದೆ ಎಂದು ದೂರಿದರು.
ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ದೂರದ ಗ್ರಾಮಗಳಿಂದ ಸಾರ್ವಜನಿಕರು ಬೆಳಗಿನ ಜಾವ 3–4 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಪಟ್ಟಣಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ ಕೇವಲ ಸುಮಾರು 20 ಮಂದಿಗೆ ಮಾತ್ರ ನೋಂದಣಿ ಅಥವಾ ತಿದ್ದುಪಡಿ ಮಾಡಲಾಗುತ್ತಿದ್ದು, ಉಳಿದವರು ನಿರಾಶೆಯಿಂದ ಊರಿಗೆ ಹಿಂದಿರುಗಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಸೇವೆಗಳನ್ನು ಪಡೆಯಲು ಆಧಾರ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ರೇಷನ್ ಕಾರ್ಡ್ಗೆ ಕೆವೈಸಿ, ಶಾಲಾ-ಕಾಲೇಜುಗಳ ಪ್ರವೇಶ ಸೇರಿದಂತೆ ಹಲವು ಕೆಲಸಗಳಿಗೆ ಆಧಾರ್ ಅಗತ್ಯವಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಕ್ಕೊಂದು ಹಾಗೂ ಪ್ರತಿ ಹೋಬಳಿಗೊಂದು ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಬೇಕು. ಆಧಾರ್ ಸೇವೆಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿರುವ ಆಪರೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಹಣ ವಸೂಲಿ ಮಾಡುವ ಆಪರೇಟರ್ಗಳ ಸೇವೆಯನ್ನು ಸ್ಥಗಿತಗೊಳಿಸಿ, ಪ್ರಾಮಾಣಿಕ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಹೊಸ ಆಪರೇಟರ್ಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಆಧಾರ್ ಕೇಂದ್ರಗಳ ಕೊರತೆಯಿಂದ ಗ್ರಾಮೀಣ ಜನರು ಪ್ರತಿದಿನ ಜೆವರ್ಗಿ ಪಟ್ಟಣಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಪರೀದ್, ಸಿದ್ದಲಿಂಗ ಮಾಹೂರ್, ರವಿ ಸರ್ಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



