ವಯೋನಿವೃತ್ತಿ ಸನ್ಮಾನ: ಕಂದಾಯ ಇಲಾಖೆಯ ಕಲ್ಯಾಣಕರ್ ಸೇವೆಗೆ ಮಲ್ಲಣ್ಣಪ್ಪ ಸ್ವಾಮೀಜಿ ಶ್ಲಾಘನೆ

ಜೇವರ್ಗಿ, ಸೆ.12- ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸಾಯಿಬಣ್ಣ ಬಿ. ಕಲ್ಯಾಣಕರ್ ಅವರು ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದ್ದು, ಸರ್ಕಾರಿ ಸೇವೆಯ ಅವಧಿಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ತೋನಸನಹಳ್ಳಿ ಮಲ್ಲಣ್ಣಪ್ಪ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ತಾಲೂಕು ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸಾಯಿಬಣ್ಣ ಬಿ. ಕಲ್ಯಾಣಕರ್ ಅವರ ವಯೋನಿವೃತ್ತಿ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಯಿಬಣ್ಣ ಕಲ್ಯಾಣಕರ್ ಅವರು ಸರ್ಕಾರಿ ಸೇವೆಯಲ್ಲಿದ್ದಾಗ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಗೆ ಜನರೇ ಸಾಕ್ಷಿಯಾಗಿದ್ದಾರೆ ಎಂದು ಮಲ್ಲಣ್ಣಪ್ಪ ಸ್ವಾಮೀಜಿ ಶ್ಲಾಘಿಸಿದರು.
ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬಸವರಾಜ್ ಪಾಟೀಲ್ ನರಿಬೋಳ್ ಉದ್ಘಾಟಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಶೌಕತ್ ಅಲಿ ಆಲೂರು, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ಮುಖಂಡರಾದ ವಸಂತರಾಯ ನರಿಬೋಳ್, ತಮ್ಮಣ್ಣ ಬಾಗೇವಾಡಿ ಹಾಗೂ ಭೀಮರಾಯ ನಾಗನೂರು ಅವರು ಜ್ಯೋತಿ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್ಐ ಮಹಿಬೂಬ್ ಅಲಿ, ನ್ಯಾಯವಾದಿ ರಮೇಶ್ ಬಾಬು, ಚನ್ನಮಲ್ಲಯ್ಯ ಹಿರೇಮಠ, ಎಸ್.ಕೆ. ಬಿರಾದಾರ್, ಮೈಲಾರಿ ಗುಡೂರು, ಚಂದ್ರಶೇಖರ್ ಸೀರಿ, ಚಂದ್ರಶೇಖರ್ ತುಂಬಿಗಿ, ಸಿದ್ರಾಮ ಕಟ್ಟೆ, ಮರೇಪ್ಪ ಬೇಗಾರ, ಗಿರೀಶ್ ತುಂಬಿಗಿ, ರವಿ ಕುಳಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಗವಂತರಾಯ ಬೆಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಕೇರೂರು ಸ್ವಾಗತಿಸಿದರು. ಶ್ರೀಹರಿ ಕರಕಳ್ಳಿ ವಂದಿಸಿದರು.



