ಎಸ್ಐಆರ್-2026: ಕಲಬುರಗಿಯಲ್ಲಿ 4.06 ಲಕ್ಷ ಗಣತಿ ನಮೂನೆಗಳ ವಿತರಣೆ; 96.84% ಮತದಾರರ ಮ್ಯಾಪಿಂಗ್ ಪೂರ್ಣ

ಜುಲೈ 29ರವರೆಗೆ ಮನೆ-ಮನೆ ಸಮೀಕ್ಷೆ; 23.71 ಲಕ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ವೇಗ
ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್ 30ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೂನ್ 16ರ ಮಾಹಿತಿಯಂತೆ ಜಿಲ್ಲೆಯಲ್ಲಿರುವ ಒಟ್ಟು 23,71,542 ಮತದಾರರಿಗೆ ಅಗತ್ಯ ಗಣತಿ ನಮೂನೆಗಳನ್ನು ಬಿಎಲ್ಒಗಳ ಮೂಲಕ ತಲುಪಿಸಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 96.84 ಶೇಕಡಾ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಮನೆ-ಮನೆ ಸಮೀಕ್ಷೆ ಹಾಗೂ ಮಾಹಿತಿಯ ಡಿಜಿಟಲೀಕರಣ ಕಾರ್ಯವು ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಾದ್ಯಂತ 4,06,323 ಗಣತಿ ನಮೂನೆಗಳು (17.13%) ಮತದಾರರಿಗೆ ವಿತರಿಸಲಾಗಿದ್ದು, 4,784 ನಮೂನೆಗಳು (0.20%) ಡಿಜಿಟಲೀಕರಣಗೊಂಡಿವೆ. ಅಲ್ಲದೆ, 783 ಮತದಾರರು (0.03%) ಆನ್ಲೈನ್ ಮೂಲಕ ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ.
ಪರಿಷ್ಕರಣೆ ಪ್ರಕ್ರಿಯೆಯ ವೇಳೆ ಇದುವರೆಗೆ 7 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 42 ಮೃತ ಮತದಾರರು ಹಾಗೂ 23 ಈಗಾಗಲೇ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತದಾರರು ಬಿಎಲ್ಒಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸುವ ಮೂಲಕ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.



