ಶಿಕ್ಷಣ

ಜಿಎಸ್‌ಟಿ ಜಾರಿಯಿಂದ ದೇಶದ ಅಭಿವೃದ್ಧಿಗೆ ಹೊಸ ವೇಗ: ಸುನೀಲಕುಮಾರ್

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಜಿಎಸ್‌ಟಿಯಿಂದ ಆದಾಯ ಹೆಚ್ಚಳ, ಪಾರದರ್ಶಕತೆ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆತಿದೆ ಎಂದು ಅಭಿಪ್ರಾಯ

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾದ ನಂತರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಸಾರ್ವಜನಿಕರ ಜೀವನಮಟ್ಟ ಸುಧಾರಣೆಗೆ ಹಾಗೂ ದೇಶದ ಅಭಿವೃದ್ಧಿಗೆ ಇದು ಪ್ರಮುಖ ಪಾತ್ರವಹಿಸಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಸುನೀಲಕುಮಾರ್ ಟಿ.ಕೆ. ಹೇಳಿದರು.

ಕಲಬುರಗಿ ಜಿಲ್ಲೆಯ ಕದಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಹಾಗೂ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಜಿಎಸ್‌ಟಿ ಸುಧಾರಣೆಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಪರಿವರ್ತನೆ: ವಿಕಸಿತ ಭಾರತ–2047ರ ಸಾಧನೆಯ ಮಾರ್ಗ’ ವಿಷಯದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಎಸ್‌ಟಿ ಜಾರಿಯಾದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಆದಾಯ ಗಣನೀಯವಾಗಿ ಹೆಚ್ಚಳವಾಗಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ. ತೆರಿಗೆ ಪಾವತಿಯನ್ನು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯಾಗಿ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.

ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ‘ಏಕ ಭಾರತ–ಶ್ರೇಷ್ಠ ಭಾರತ’ ಹಾಗೂ ‘ವಿಕಸಿತ ಭಾರತ–2047’ ಗುರಿ ಸಾಧನೆಯಲ್ಲಿ ಜಿಎಸ್‌ಟಿ ಪ್ರಮುಖ ಆರ್ಥಿಕ ಸುಧಾರಣೆಯಾಗಿದೆ ಎಂದು ಹೇಳಿದರು. ಜಿಎಸ್‌ಟಿ ದೇಶದ ತೆರಿಗೆ ವ್ಯವಸ್ಥೆಯನ್ನು ಏಕೀಕೃತಗೊಳಿಸುವುದರ ಜೊತೆಗೆ ಆರ್ಥಿಕ ಪಾರದರ್ಶಕತೆ, ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಸಮಗ್ರ ಅಭಿವೃದ್ಧಿಗೆ ಬಲ ತುಂಬಿದೆ ಎಂದು ತಿಳಿಸಿದರು.

ಜಿಎಸ್‌ಟಿ ಜಾರಿಯಿಂದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ದೊರೆತಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗಿವೆ. ತೆರಿಗೆ ಸಂಗ್ರಹದಲ್ಲೂ ನಿರಂತರ ಏರಿಕೆಯಾಗಿದ್ದು, 2017ರಲ್ಲಿ ಸುಮಾರು ₹7.41 ಲಕ್ಷ ಕೋಟಿ ಇದ್ದ ಜಿಎಸ್‌ಟಿ ಸಂಗ್ರಹವು ಈಗ ₹22.27 ಲಕ್ಷ ಕೋಟಿಗೆ ಏರಿಕೆಯಾಗಿದೆ. ವಾರ್ಷಿಕ ಸರಾಸರಿ ಶೇ.14ರಷ್ಟು ಬೆಳವಣಿಗೆ (CAGR) ದಾಖಲಾಗಿರುವುದು ಜಿಎಸ್‌ಟಿ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ ಎಂದು ಸುನೀಲಕುಮಾರ್ ಮಾಹಿತಿ ನೀಡಿದರು.

ಆರೋಗ್ಯ, ಆಹಾರ, ಶಿಕ್ಷಣ ಹಾಗೂ ಇತರೆ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ತೆರಿಗೆ ವ್ಯವಸ್ಥೆಯ ಸುಧಾರಣೆಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಹಲವು ಸೌಲಭ್ಯಗಳು ದೊರೆತಿವೆ ಎಂದು ಅವರು ಹೇಳಿದರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಸಂಶೋಧಕರು ಹಾಗೂ ಪ್ರಾಧ್ಯಾಪಕರು ಜಿಎಸ್‌ಟಿ ಕುರಿತ ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಸಮಾರೋಪದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ವಿಭಾಗದ ಮುಖ್ಯಸ್ಥ ಡಾ. ಅನಂತ ಚಿಂಚೂರೆ, ಸಂಚಾಲಕ ಡಾ. ಜಯಂತ ಬೋರುವಾ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಡಾ. ಜಗದೀಶಚಂದ್ರ ಟಿ.ಜಿ. ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button