ಕೆಪಿಎಸ್‌ಸಿ ಭ್ರಷ್ಟಾಚಾರದ ವಿರುದ್ಧ ಎಐಡಿವೈಒ ಪ್ರತಿಭಟನೆ
ನೇಮಕಾತಿ ಅಕ್ರಮಗಳಿಗೆ ಕಡಿವಾಣ ಹಾಕಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರ್ಕಾರಕ್ಕೆ ಆಗ್ರಹ

ಕಲಬುರಗಿ, ಆ.6: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ, ನೇಮಕಾತಿ ಅಕ್ರಮಗಳು ಹಾಗೂ ಪರೀಕ್ಷಾ ಅಸಂಗತತೆಗಳನ್ನು ಖಂಡಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನತಾಂತ್ರಿಕ ಯುವಜನ ಸಂಘಟನೆ (ಎಐಡಿವೈಒ) ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಐಡಿವೈಒ ಜಿಲ್ಲಾ ಅಧ್ಯಕ್ಷ ಎಸ್.ಎಚ್. ಜಗನ್ನಾಥ್, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಪದೇಪದೇ ಬೆಳಕಿಗೆ ಬರುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬದಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
1998–99ರ ನೇಮಕಾತಿ ವಿವಾದಗಳಿಂದ ಆರಂಭವಾಗಿ, 2011ರ ಪರೀಕ್ಷಾ ಅಕ್ರಮಗಳು, 2014ರ ಪ್ರಶ್ನೆಪತ್ರಿಕೆ ಸೋರಿಕೆ, 2019ರ ಅಂಕ ತಿದ್ದುಪಡಿ ಆರೋಪಗಳು ಹಾಗೂ ಇತ್ತೀಚಿನ ವಿವಿಧ ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳು ಅಭ್ಯರ್ಥಿಗಳ ವಿಶ್ವಾಸಕ್ಕೆ ಧಕ್ಕೆ ತಂದಿವೆ ಎಂದು ಅವರು ಹೇಳಿದರು. ಪ್ರತಿ ಹಗರಣವೂ ಸಾವಿರಾರು ಯುವಕರ ಶ್ರಮ, ಸಮಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಅರ್ಹತೆಗಿಂತ ಹಣ, ಪ್ರಭಾವ ಮತ್ತು ಲಂಚಕ್ಕೆ ಅವಕಾಶ ಸಿಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಮೂಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರವು ಕೆಲವೇ ಅಭ್ಯರ್ಥಿಗಳ ಸಮಸ್ಯೆಯಲ್ಲ; ಇದು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಆದ್ದರಿಂದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿ, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಜನವಿಶ್ವಾಸ ಗಳಿಸುವ ರೀತಿಯಲ್ಲಿ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಉದ್ಯೋಗಾಕಾಂಕ್ಷಿಗಳ ಸಮಿತಿಯ ಪರವಾಗಿ ಮಾತನಾಡಿದ ರಮೇಶ್ ದೇವಕರ, ಕೆಪಿಎಸ್‌ಸಿಯಲ್ಲಿನ ಎಲ್ಲ ಭ್ರಷ್ಟಾಚಾರ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ವಿಷಯ ಪರಿಣಿತರನ್ನು ಒಳಗೊಳ್ಳಬೇಕು. ಸಿಬ್ಬಂದಿಯನ್ನು ನಿಯಮಿತವಾಗಿ ವರ್ಗಾವಣೆ ಮಾಡಬೇಕು ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ಸಮಯಬದ್ಧವಾಗಿ ನಡೆಸಬೇಕು ಎಂದು ಆಗ್ರಹಿಸಿದರು.
ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಭೂಮಾಪಕರ ನೇಮಕಾತಿಯನ್ನು ಕೆಪಿಎಸ್‌ಸಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವರ್ಗಾಯಿಸಿದರೂ, ಈ ಹುದ್ದೆಗಳಿಗಾಗಿ ಕೆಪಿಎಸ್‌ಸಿ ಈಗಾಗಲೇ ಸಂಗ್ರಹಿಸಿರುವ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೇಜಸ್ ಆರ್. ಇಬ್ರಾಹಿಂಪುರ, ಪುಟ್ಟರಾಜ್ ಲಿಂಗಶೆಟ್ಟಿ, ಪ್ರಶಾಂತ್ ಹಾದಿಮನಿ, ದತ್ತು ಹುರುಡೆಕರ್, ಕುಮಾರ್ ಚೌದ್ರಿ, ಮಂಜುನಾಥ ದೊರೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.



