ಶಿಕ್ಷಣಸಾಂಸ್ಕೃತಿಕ

ದೇಶಭಕ್ತಿಗೀತೆ, ಜಾನಪದ ಗಾಯನ ಸ್ಪರ್ಧೆ ಯಶಸ್ವಿ

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ; ವಿಜೇತರಿಗೆ ಪ್ರಮಾಣಪತ್ರ ವಿತರಣೆ

ಕಲಬುರಗಿ, ನ. 2: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಹಾಗೂ ಜಾನಪದ ಗೀತೆ ಗಾಯನ ಸ್ಪರ್ಧೆಯನ್ನು ನಗರದ ಮೌಂಟ್ ಲಿಟರಾ ಜೀ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಗಣ್ಯರನ್ನು ಸ್ವಾಗತಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಪೀರಪ್ಪ ಹೂಗೂಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮುಂದಿನ ವಿಭಾಗ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಜಯಗಳಿಸುವಂತಾಗಲಿ ಎಂದು ಹಾರೈಸಿದರು.

ಶಾಲೆಯ ಸಂಸ್ಥಾಪಕ ಹಾಗೂ ಕಾರ್ಯಕ್ರಮದ ಉದ್ಘಾಟಕ ನಾಸೀರ್ ಅಲಿ ಅವರು ಸಸಿಗೆ ನೀರುಣಿಸುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇಂತಹ ವೇದಿಕೆಗಳು ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದರು.

ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೇಣುಕಾ ಡಾಂಗೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ಸ್ ಆಯುಕ್ತ ಎಸ್.ಪಿ. ಸುಳ್ಳದ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಮೂಲಕ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸುವ ಅವಕಾಶಗಳಿವೆ. ಶಿಸ್ತು, ಸಂಯಮ ಮತ್ತು ಸಮಯಪಾಲನೆ ವಿದ್ಯಾರ್ಥಿ ಜೀವನದ ಪ್ರಮುಖ ಗುಣಗಳಾಗಿವೆ. ಸಂಸ್ಥೆಯ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮೌಂಟ್ ಲಿಟರಾ ಜೀ ಶಾಲೆಯ ನಿರ್ದೇಶಕ ತಾಯರ್ ಅಲಿಖಾನ್, ಆಡಳಿತಾಧಿಕಾರಿ ರೂಹೀತ್ ಘಾಟಗೆ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಮೊಹಮ್ಮದ್, ಜಿಲ್ಲಾ ಖಜಾಂಚಿ ಪ್ರಮೀಳಾ ಪಾಟೀಲ, ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜಕುಮಾರ್ ಮರಾಠೆ, ಸಹ ಕಾರ್ಯದರ್ಶಿ ಸಿದ್ದರಾಮ ರಾಜಮಾನೆ, ಜಿಲ್ಲಾ ತರಬೇತಿ ಆಯುಕ್ತ ಅಮರೇಶ ಕೋರಿ, ಕಲಬುರಗಿ ಉತ್ತರ ತಾಲ್ಲೂಕು ಕಾರ್ಯದರ್ಶಿ ಜಯಪ್ರಕಾಶ್ ಕಟ್ಟಿಮನಿ, ಕಲಬುರಗಿ ದಕ್ಷಿಣ ತಾಲ್ಲೂಕು ಕಾರ್ಯದರ್ಶಿ ಗುರುಲಿಂಗಯ್ಯ ಹಿರೇಮಠ, ಚಿಂಚೋಳಿ ತಾಲ್ಲೂಕು ಕಾರ್ಯದರ್ಶಿ ನರಸಿಂಗ್ ರಾಠೋಡ, ಚಿತ್ತಾಪುರ ತಾಲ್ಲೂಕು ಕಾರ್ಯದರ್ಶಿ ರಾಣಪ್ಪ ಸಂಗನ ಹಾಗೂ ಹಿರಿಯ ಸ್ಕೌಟ್ಸ್ ಶಿಕ್ಷಕ ರಾಜೇಂದ್ರ ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ಕಲಬುರಗಿ ವಿಶ್ವವಿದ್ಯಾಲಯದ ಸಂಗೀತ ಉಪನ್ಯಾಸಕ ಸಿದ್ದಾರ್ಥ ಚಿಮ್ಮ ಹಾಗೂ ಇದಲಾಯಿ ಅವರು ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಗೈಡ್ಸ್‌ನ ಸಂಗೀತಾ ತಿವಾರಿ ಮತ್ತು ನೂರ್ ಜಹಾನ್ ಸಹಕರಿಸಿದರು.

ಸ್ಪರ್ಧೆಯಲ್ಲಿ ಕಬ್, ಬುಲ್‌ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿಭಾಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿಗೀತೆ ಹಾಗೂ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಸ್ಪರ್ಧೆಗಳು ಶಿಸ್ತುಬದ್ಧವಾಗಿ ನಡೆದವು. ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ರಾಣಪ್ಪ ಸಂಗನ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್.ಒ.ಸಿ. ಶರೀಫ್ ಹತ್ತಿಮತ್ತೂರು ವಂದನಾರ್ಪಣೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button