ರಾಜಕೀಯ

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ

ಅ. 27ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಣಿಕೆ ಆರಂಭ; 14 ಮೇಜುಗಳ ವ್ಯವಸ್ಥೆ, ಪ್ರತಿ ಎರಡು ಮೇಜುಗಳಿಗೆ ಜಿಲ್ಲಾಧಿಕಾರಿಗಳ ಉಸ್ತುವಾರಿ

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 27ರಂದು ಬೆಳಿಗ್ಗೆ 8 ಗಂಟೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ ಸಭಾಂಗಣದಲ್ಲಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದರು.

ಸೋಮವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆಗಾಗಿ ಒಟ್ಟು 14 ಮೇಜುಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮೇಜಿನಲ್ಲಿ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಇಬ್ಬರು ಸಹಾಯಕ ಅಧಿಕಾರಿಗಳು ಮತ ಎಣಿಕೆ ಕಾರ್ಯ ನಿರ್ವಹಿಸಲಿದ್ದಾರೆ. ಮತಪೆಟ್ಟಿಗೆಗಳನ್ನು ಸಾಗಿಸಲು ಒಬ್ಬ ‘ಡಿ’ ದರ್ಜೆಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.

ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಪ್ರತಿ ಮೇಜಿನಲ್ಲೂ 13 ಟ್ರೇಗಳನ್ನು ಇರಿಸಲಾಗುತ್ತದೆ. ತಿರಸ್ಕೃತ ಹಾಗೂ ಸಂಶಯಾಸ್ಪದ ಮತಗಳಿಗಾಗಿ ಪ್ರತ್ಯೇಕ ಟ್ರೇಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟ್‌ಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಭದ್ರತಾ ಕೊಠಡಿಯನ್ನು ತೆರೆದು ಮತ ಎಣಿಕೆ ಆರಂಭಿಸಲಾಗುತ್ತದೆ. ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ ಎಂದರು.

ಅಕ್ಟೋಬರ್ 23ರಂದು ನಡೆದ ಮತದಾನದಲ್ಲಿ ಒಟ್ಟು 34,784 ಮತದಾರರ ಪೈಕಿ 30,250 ಮಂದಿ ಮತ ಚಲಾಯಿಸಿದ್ದು, ಶೇ. 86.97ರಷ್ಟು ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಏಳು ಜಿಲ್ಲೆಗಳು ಒಳಪಡುವುದರಿಂದ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಎರಡು ಮೇಜುಗಳ ಮತ ಎಣಿಕೆಯ ಮೇಲ್ವಿಚಾರಣೆಯನ್ನು ಒಬ್ಬ ಜಿಲ್ಲಾಧಿಕಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಮೊಬೈಲ್ ಸೇರಿದಂತೆ ಹಲವು ವಸ್ತುಗಳಿಗೆ ನಿಷೇಧ

ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳು, ಚುನಾವಣಾ ಏಜೆಂಟ್‌ಗಳು ಹಾಗೂ ಮತ ಎಣಿಕೆ ಸಿಬ್ಬಂದಿ ಸೇರಿದಂತೆ ಯಾರೂ ಮೊಬೈಲ್ ಫೋನ್, ಬೆಂಕಿಪೊಟ್ಟಣ, ಲೈಟರ್, ಶಾಯಿಯ ಲೇಖನಿ, ಸಿಗರೇಟ್, ಪಾನ್, ಬೀಡಾ, ತಂಬಾಕು ಹಾಗೂ ನೀರಿನ ಬಾಟಲಿಗಳನ್ನು ತರುವಂತಿಲ್ಲ. ಈ ವಸ್ತುಗಳನ್ನು ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ಜಹೀರಾ ನಸೀಮ್ ಸ್ಪಷ್ಟಪಡಿಸಿದರು.

ಗಣಿತ ವಿಭಾಗದ ಸಿಬ್ಬಂದಿಗೆ ರಜೆ

ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ ಸಭಾಂಗಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಅಂದು ಗಣಿತ ವಿಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಭದ್ರತಾ ಕೊಠಡಿಯ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ವಾಹನ ಸಂಚಾರ ನಿರ್ಬಂಧ

ಮತ ಎಣಿಕೆ ದಿನದಂದು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಭ್ಯರ್ಥಿಗಳು ಮತ್ತು ಪತ್ರಕರ್ತರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಹಾಗೂ ಪ್ರಭಾರ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಪ್ರಮೀಳಾ ಎಂ.ಕೆ. ಸೇರಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಾಶಸ್ತ್ಯ ಮತಗಳ ಎಣಿಕೆ ಹೇಗೆ ನಡೆಯಲಿದೆ?

ಈ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತಗಳ ಎಣಿಕೆ ನಡೆಯಲಿದೆ. ಮೊದಲಿಗೆ 144 ಮತಪೆಟ್ಟಿಗೆಗಳ ಮತಪತ್ರಗಳನ್ನು ಮೇಜುವಾರು ವಿಂಗಡಿಸಿ, ತಲಾ 25 ಮತಪತ್ರಗಳ ಕಂತೆಗಳನ್ನು ಸಿದ್ಧಪಡಿಸಿ ಬ್ಯಾರೆಲ್‌ನಲ್ಲಿ ಹಾಕಿ ಯಾದೃಚ್ಛಿಕವಾಗಿ ಹಂಚಿಕೆ ಮಾಡಲಾಗುತ್ತದೆ. ಬಳಿಕ ಪ್ರತಿ ಸುತ್ತಿನಲ್ಲಿ ಪ್ರತಿ ಮೇಜಿಗೆ 40 ಕಂತೆಗಳಂತೆ ಮತಪತ್ರಗಳನ್ನು ನೀಡಲಾಗುತ್ತದೆ.

ಒಟ್ಟು 30,250 ಮತಗಳು ಚಲಾವಣೆಯಾಗಿರುವುದರಿಂದ 14 ಮೇಜುಗಳಲ್ಲಿ ಮೂರು ಸುತ್ತುಗಳ ಮೂಲಕ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ನಂತರ ತಿರಸ್ಕೃತ ಮತಗಳನ್ನು ತೆಗೆದುಹಾಕಿ, ಸಿಂಧುವಾದ ಮತಗಳ ಆಧಾರದಲ್ಲಿ ಗೆಲುವಿಗೆ ಅಗತ್ಯವಾದ ಕೋಟಾವನ್ನು ನಿರ್ಧರಿಸಲಾಗುತ್ತದೆ.

ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿ ನಿಗದಿತ ಗೆಲುವಿನ ಕೋಟಾವನ್ನು ತಲುಪಿದರೆ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಯಾರೂ ಕೋಟಾ ತಲುಪದಿದ್ದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭಿಸಲಾಗುತ್ತದೆ. ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಸ್ಪರ್ಧೆಯಿಂದ ಹೊರಗಿಟ್ಟು, ಅವರ ಮತಪತ್ರಗಳಲ್ಲಿನ ಮುಂದಿನ ಪ್ರಾಶಸ್ತ್ಯದ ಮತಗಳನ್ನು ಅರ್ಹ ಅಭ್ಯರ್ಥಿಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆ ಗೆಲುವಿನ ಕೋಟಾವನ್ನು ತಲುಪುವವರೆಗೆ ಮುಂದುವರಿಯಲಿದ್ದು, ನಿಗದಿತ ಕೋಟಾ ತಲುಪುವ ಅಭ್ಯರ್ಥಿಯನ್ನು ಅಂತಿಮವಾಗಿ ವಿಜಯಿ ಎಂದು ಘೋಷಿಸಲಾಗುತ್ತದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button