ಧಾರ್ಮಿಕಸಾಂಸ್ಕೃತಿಕ

ಶಾಂತಿನಗರದಲ್ಲಿ ನವರಾತ್ರಿ ಉತ್ಸವ ಸಂಪನ್ನ: ದೇವಿ ಮೂರ್ತಿಗೆ ಗಂಗಾಪೂಜೆ

ಜೈ ಅಂಬಾ ಭವಾನಿ ಚಾರಿಟೇಬಲ್ ಟ್ರಸ್ಟ್‌ನಿಂದ ಒಂಬತ್ತು ದಿನಗಳ ಉತ್ಸವ; ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲರಿಂದ ₹25 ಲಕ್ಷ ಅನುದಾನ

ಕಲಬುರಗಿ: ನಗರದ ಶಾಂತಿನಗರ ಬಡಾವಣೆಯ ಜೈ ಅಂಬಾ ಭವಾನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಸರಾ ಹಬ್ಬದ ಅಂಗವಾಗಿ ಅಂಬಾ ಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಒಂಬತ್ತು ದಿನಗಳ ನವರಾತ್ರಿ ಉತ್ಸವ ಭಕ್ತಿಭಾವದಿಂದ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಉಪನ್ಯಾಸ, ಭಜನೆ ಹಾಗೂ ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನವರಾತ್ರಿ ಉತ್ಸವದ ಬಳಿಕ ಹುಣ್ಣಿಮೆಯ ದಿನದಂದು ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಯಿತು. ನಂತರ ದೇವಿಯ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಉತ್ಸವದ ಆರಂಭದಿಂದಲೂ ಕರ್ನಾಟಕ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಹಾಗೂ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ಅಭಿಷೇಕ್ ಪಾಟೀಲ ಅವರು ಕೂಡ ಉತ್ಸವದ ಆರಂಭದಿಂದ ಕೊನೆಯವರೆಗೂ ಭಾಗವಹಿಸಿದರು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹25 ಲಕ್ಷ ಅನುದಾನ

ಅಂಬಾ ಭವಾನಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಕಟ್ಟಡದ ಅಭಿವೃದ್ಧಿಗಾಗಿ ಶಾಸಕ ಅಲ್ಲಮಪ್ರಭು ಪಾಟೀಲ ಅವರು ತಮ್ಮ ಶಾಸಕರ ನಿಧಿಯಿಂದ ₹25 ಲಕ್ಷ ಅನುದಾನ ನೀಡಿದ್ದಾರೆ. ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಜೈ ಅಂಬಾ ಭವಾನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಶರಣಪ್ಪ ಕಕ್ಕಳಮೇಲಿ, ಉಪಾಧ್ಯಕ್ಷ ಅಶೋಕ ಹೌದೆ, ದೇವಸ್ಥಾನದ ಕಟ್ಟಡದ ಎಂಜಿನಿಯರ್ ಬಿರಾದಾರ, ಪದಾಧಿಕಾರಿಗಳಾದ ಚನ್ನಪ್ಪ ಮರಬ, ಶಂಭುಲಿಂಗ ಪಾಟೀಲ, ಅಮೃತ ಬಿರಾದಾರ, ವಿಠ್ಠಲ್ ಜಾಧವ, ಲಕ್ಷ್ಮಣ ಚೌಹಾಣ, ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ, ಶರಣು ಬೇಳಕೇರಿ ಸೇರಿದಂತೆ ಟ್ರಸ್ಟ್‌ನ ಸದಸ್ಯರು ಹಾಗೂ ಶಾಂತಿನಗರ ಬಡಾವಣೆಯ ನೂರಾರು ನಿವಾಸಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಉತ್ಸವ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಟ್ರಸ್ಟ್‌ನ ಕಾರ್ಯದರ್ಶಿ ಭಾನುಕುಮಾರ ಗಿರೇಗೋಳ, ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಕರ್ನಾಟಕ ಜಾನಪದ ಪರಿಷತ್ತು ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button