ಸಾಂಸ್ಕೃತಿಕಸಾಹಿತ್ಯ

ಪುಸ್ತಕ ಓದುವುದರಿಂದ ಅಹಂಕಾರ ಅಳಿಯುತ್ತದೆ: ಡಾ. ವಿಜಯಕುಮಾರ ಪರೂತೆ

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸಲು ಕರೆ; ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ದಂಪತಿಗೆ ಗೌರವ

ಕಲಬುರಗಿ: ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸಿದರೆ ಮನುಷ್ಯನ ಬದುಕು ಹಸನಾಗುತ್ತದೆ. ಪುಸ್ತಕಗಳಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ವ್ಯಕ್ತಿಯಲ್ಲಿ ವಿನಯ ಬೆಳೆಯುತ್ತದೆ ಮತ್ತು ಅಹಂಕಾರ ದೂರವಾಗುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ವಿಜಯಕುಮಾರ ಪರೂತೆ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ವತಿಯಿಂದ ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅವರ ಮನೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಓದುವ ಹವ್ಯಾಸ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪುಸ್ತಕಗಳಿಂದ ಮಸ್ತಕ ಬೆಳೆಯುತ್ತದೆ ಎಂಬ ಮಾತು ಅರ್ಥಪೂರ್ಣವಾಗಿದೆ. ಓದು ವ್ಯಕ್ತಿಯಲ್ಲಿ ವಿನಯವನ್ನು ಬೆಳೆಸುವುದರೊಂದಿಗೆ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಗೃಹಪ್ರವೇಶದೊಂದಿಗೆ ಗ್ರಂಥಾಲಯ ಉದ್ಘಾಟಿಸುವ ಸಂಪ್ರದಾಯ ಬರಲಿ

ಮುಖ್ಯ ಅತಿಥಿಯಾಗಿದ್ದ ಮಕ್ಕಳ ಸಾಹಿತಿ ಎಚ್.ಬಿ. ತೀರ್ಥೆ ಮಾತನಾಡಿ, ಹೊಸ ಮನೆ ನಿರ್ಮಿಸಿದಾಗ ಗೃಹಪ್ರವೇಶದೊಂದಿಗೆ ಮನೆಯ ಗ್ರಂಥಾಲಯವನ್ನೂ ಉದ್ಘಾಟಿಸುವ ಸಂಪ್ರದಾಯ ಆರಂಭವಾದರೆ ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷ ರವೀಂದ್ರ ಶಾಬಾದಿ ಮಾತನಾಡಿ, ವಚನ ಸಾಹಿತ್ಯವು ಅನುಭಾವದ ಸಾಹಿತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಗ್ರಂಥಾಲಯದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿಡಬೇಕು. ವಚನಗಳು ಬದುಕಿನ ಮೌಲ್ಯಗಳನ್ನು ತಿಳಿಸುವುದರ ಜೊತೆಗೆ ಜೀವನ ನಡೆಸುವ ಸರಿಯಾದ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಆಶಯ ನುಡಿಗಳನ್ನಾಡಿ, ಹಿರಿಯ ಸಾಧಕರು ಮತ್ತು ಗಣ್ಯ ವ್ಯಕ್ತಿಗಳ ಕುರಿತು ಪುಸ್ತಕಗಳನ್ನು ಪ್ರಕಟಿಸಿ, ಕಡಿಮೆ ದರದಲ್ಲಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಪ್ರಾಧಿಕಾರ ಮಾಡುತ್ತಿದೆ. ಮುದ್ರಕರು, ಪ್ರಕಾಶಕರು ಹಾಗೂ ಓದುಗರ ನಡುವೆ ಪ್ರಾಧಿಕಾರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ರಾಜಕಾರಣಿಗಳೂ ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ರಾಜಕಾರಣಿಗಳು ಪುಸ್ತಕ ಓದುವ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಪುಸ್ತಕ ಸಂಸ್ಕೃತಿ ಬಲಗೊಳ್ಳುತ್ತದೆ. ಓದು ಜ್ಞಾನ ಮತ್ತು ವಿವೇಚನೆಯನ್ನು ವೃದ್ಧಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಬಲ್ಲದು. ಸಮಾಜದ ಅಭಿವೃದ್ಧಿಯ ಜೊತೆಗೆ ಭೌತಿಕ ಅಭಿವೃದ್ಧಿಗೂ ಜ್ಞಾನಾಧಾರಿತ ಚಿಂತನೆ ಅಗತ್ಯ. ಆದ್ದರಿಂದ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಇದೇ ಸಂದರ್ಭದಲ್ಲಿ ಡಾ. ಶಿವರಂಜನ ಸತ್ಯಂಪೇಟೆ ಹಾಗೂ ಅವರ ಪತ್ನಿ ಸಾಕ್ಷಿ ಅವರಿಗೆ ‘ಮನೆಗೊಂದು ಗ್ರಂಥಾಲಯ’ದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ದೂರದರ್ಶಕವನ್ನು ನಿರ್ಮಿಸಿ ಗಿನ್ನೆಸ್ ದಾಖಲೆಗೆ ಪಾತ್ರರಾಗಿರುವ ವಾಸು ನಾಗರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಜಾಗೃತ ಸಮಿತಿಯ ಸದಸ್ಯ ರೇವಣಸಿದ್ದಪ್ಪ ದುಖಾನ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಸಮಿತಿಯ ಸದಸ್ಯ ಡಾ. ಮಹೇಶ ಗಂವ್ಹಾರ ವಂದಿಸಿದರು.

ಅಪ್ಪಾಸಾಹೇಬ ತೀರ್ಥೆ, ಚಾಮರಾಜ ದೊಡ್ಡಮನಿ, ಸತೀಶ ಸಜ್ಜನ್, ಸಂಗಣ್ಣ ಜಿ., ಪ್ರಮಥ, ಪ್ರಣವ, ಡಾ. ಅಶೋಕ ದೊಡ್ಡಮನಿ, ಅವಿನಾಶ, ನಾಗರಾಜ ಹುರಳಗೇರಾ ಸೇರಿದಂತೆ ಹಲವರು ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button