ಸಾಂಸ್ಕೃತಿಕ

ಮಹರ್ಷಿ ವಾಲ್ಮೀಕಿ ಜೀವನಾದರ್ಶಗಳು ಎಲ್ಲರಿಗೂ ಪ್ರೇರಣೆ

ಜೀವನ ಪರಿವರ್ತನೆ, ತಪಸ್ಸು ಮತ್ತು ಜ್ಞಾನದ ಮೂಲಕ ಮಹರ್ಷಿಯಾದ ವಾಲ್ಮೀಕಿ: ಶಿವರಾಮ ಚೌವ್ಹಾಣ

ಕಲಬುರಗಿ, ಅ. 26: ಮಹರ್ಷಿ ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಪರಿವರ್ತನೆ ಮಾಡಿಕೊಂಡು, ತಪಸ್ಸು, ಜ್ಞಾನ ಮತ್ತು ಧರ್ಮದ ಮೂಲಕ ಜಗತ್ತಿಗೆ ಅಮೂಲ್ಯ ಸಂದೇಶ ನೀಡಿದ ಮಹಾನ್ ಋಷಿಯಾಗಿದ್ದಾರೆ. ಅವರ ಜೀವನಾದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಶಿವರಾಮ ಚೌವ್ಹಾಣ ಹೇಳಿದರು.

ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಹರ್ಷಿ ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ. ಕಾಡಿನಲ್ಲಿ ಸಂಚರಿಸುತ್ತಿದ್ದ ನಾರದ ಮುನಿಗಳನ್ನು ತಡೆದು ದರೋಡೆ ಮಾಡಲು ಯತ್ನಿಸಿದ ಸಂದರ್ಭದಲ್ಲಿ, ಕುಟುಂಬದವರಿಗಾಗಿ ತಾನು ಮಾಡುತ್ತಿದ್ದ ಪಾಪದ ಕಾರ್ಯಗಳಲ್ಲಿ ಅವರೂ ಪಾಲುದಾರರಾಗುತ್ತಾರೆಯೇ ಎಂದು ನಾರದರು ರತ್ನಾಕರನನ್ನು ಪ್ರಶ್ನಿಸಿದರು. ಕುಟುಂಬದವರನ್ನು ವಿಚಾರಿಸಿದಾಗ ಅವರು ಪಾಪದ ಕಾರ್ಯಗಳಲ್ಲಿ ಪಾಲುದಾರರಾಗುವುದಿಲ್ಲ ಎಂಬ ಉತ್ತರ ದೊರೆಯಿತು. ಇದರಿಂದ ಮನಃಪರಿವರ್ತನೆಗೊಂಡ ರತ್ನಾಕರನು ನಾರದ ಮುನಿಗಳ ಉಪದೇಶದಂತೆ ತಪಸ್ಸಿನಲ್ಲಿ ನಿರತನಾದನು ಎಂದು ವಿವರಿಸಿದರು.

ರತ್ನಾಕರನು ದೀರ್ಘಕಾಲ ತಪಸ್ಸು ಮಾಡಿದಾಗ ಆತನ ಸುತ್ತ ಹುತ್ತ ಬೆಳೆಯಿತು. ಸಂಸ್ಕೃತದಲ್ಲಿ ಹುತ್ತಕ್ಕೆ ‘ವಲ್ಮೀಕ’ ಎಂದು ಕರೆಯಲಾಗುತ್ತದೆ. ಹೀಗಾಗಿ ರತ್ನಾಕರನು ‘ವಾಲ್ಮೀಕಿ’ ಎಂಬ ಹೆಸರಿನಿಂದ ಪ್ರಸಿದ್ಧನಾದನು. ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಜ್ಞಾನ ಮತ್ತು ತಪಸ್ಸಿನ ಮೂಲಕ ಮಹರ್ಷಿಯಾದ ವಾಲ್ಮೀಕಿ ಅವರು ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಚೇತನರಾಗಿದ್ದಾರೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯವನ್ನು ರಚಿಸಿದ ಆದಿಕವಿ. ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ರಾಮಾಯಣಕ್ಕೆ ಮಹತ್ವದ ಸ್ಥಾನವಿದೆ. ಶ್ರೀರಾಮನ ಜೀವನವನ್ನು ಆಧರಿಸಿದ ಈ ಮಹಾಕಾವ್ಯವು ಏಳು ಕಾಂಡಗಳನ್ನು ಒಳಗೊಂಡಿದ್ದು, ಸತ್ಯ, ಧರ್ಮ, ತಂದೆ-ತಾಯಿಯರ ಸೇವೆ, ಪ್ರಜಾಪಾಲನೆ ಹಾಗೂ ಸಹೋದರ ಪ್ರೀತಿ ಸೇರಿದಂತೆ ಅನೇಕ ಜೀವನಮೌಲ್ಯಗಳನ್ನು ಸಾರುತ್ತದೆ. ವಾಲ್ಮೀಕಿ ಅವರ ಬದುಕು ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದರು.

ಪುಷ್ಪನಮನ: ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೈಗಾರಿಕಾ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್ ಹಾಗೂ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಹಾಗೂ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button