ಕಲಬುರಗಿಯ ರೌಡಿಶೀಟರ್ ಅಸ್ಲಂ ಪಟೇಲ್ ಮೈಸೂರಿಗೆ ಗಡಿಪಾರು
೨೦ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ; ಗೂಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿಡಲು ಆದೇಶ

ಕಲಬುರಗಿ, ಅ. ೨೩: ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮದೀನಾ ಕಾಲೋನಿಯ ಮಿಜಬಾ ಚೌಕ್ ನಿವಾಸಿ, ಮೂಲತಃ ಜೇವರ್ಗಿ ತಾಲ್ಲೂಕಿನ ಬಿಳವಾರ ಗ್ರಾಮದ ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂ (೩೨) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶ ಹೊರಡಿಸಲಾಗಿದೆ.
ಆರೋಪಿತ ಅಸ್ಲಂ ಪಟೇಲ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಾನೂನುಗಳ ಅಡಿಯಲ್ಲಿ ಒಟ್ಟು ೨೦ ಪ್ರಕರಣಗಳು ದಾಖಲಾಗಿವೆ. ೨೦೧೨ರಿಂದ ೨೦೨೬ರವರೆಗೆ ಭಾರತೀಯ ದಂಡ ಸಂಹಿತೆಯಡಿ ೯ ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ–೨೦೨೩ರಡಿ ೩ ಪ್ರಕರಣಗಳು, ಅಪರಾಧ ಪ್ರಕ್ರಿಯಾ ಸಂಹಿತೆಯಡಿ ೭ ಪ್ರಕರಣಗಳು ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಸ್ಲಂ ಪಟೇಲ್‌ನನ್ನು ‘ಎ’ ವರ್ಗದ ರೌಡಿ ಎಂದು ಗುರುತಿಸಲಾಗಿದ್ದು, ಆತನ ರೌಡಿಶೀಟರ್ ದಾಖಲೆ ಪ್ರಸ್ತುತ ಚಾಲ್ತಿಯಲ್ಲಿದೆ. ಕೊಲೆ, ಕೊಲೆ ಯತ್ನ, ರೌಡಿಸಂ, ಅಪಾಯಕಾರಿ ಆಯುಧಗಳಿಂದ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ಮನೆಗೆ ಅತಿಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವುದು ಹಾಗೂ ಜಾಮೀನು ಷರತ್ತುಗಳ ಉಲ್ಲಂಘನೆಯಂತಹ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆತ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರೊಂದಿಗೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ, ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಾಜೀದ್ ಪಟೇಲ್ ಅವರು ಆರೋಪಿತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಪಾಡುವುದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕರ್ನಾಟಕ ಅಪರಾಧ ತಡೆ ಕಾಯ್ದೆ–೧೯೮೫ರ ಕಲಂ ೩ರ ಉಪಕಲಂ (೧)ರ ಅಡಿಯಲ್ಲಿ ಗೂಂಡಾ ವ್ಯಕ್ತಿತ್ವ ಹೊಂದಿರುವ ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರು, ಔಷಧಗಳ ಅಕ್ರಮ ಮಾರಾಟಗಾರರು, ಜೂಜುಕೋರರು, ಗೂಂಡಾಗಳು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವವರು ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇರುವ ಕಾನೂನಿನ ಅನ್ವಯ ಅಸ್ಲಂ ಪಟೇಲ್‌ನನ್ನು ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.


