ಶಿಕ್ಷಣಸಾಂಸ್ಕೃತಿಕಸಾಹಿತ್ಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲಿ: ಬಸವರಾಜ್ ಚಿನಿವಾರ್

ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಗ್ರಹ; ಹಿರಿಯ ಶಿಕ್ಷಕರಿಗೆ ರಾಜ್ಯಮಟ್ಟದಿಂದ ಗ್ರಾಮಮಟ್ಟದವರೆಗೆ ಗೌರವ ನೀಡಲು ಸಲಹೆ

ಕಲಬುರಗಿ, ಅ. 12: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ರಾಜ್ಯ ಘಟಕಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಹಿರಿಯ ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಆಗ್ರಹಿಸಿದರು.

ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಅಕ್ಷರಗಳಿಂದ ಅರ್ಥಜ್ಯೋತಿ ಬೆಳಗುವ ಗೌರವದ ಗುರುಗಳಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಅಗತ್ಯವನ್ನು ಒತ್ತಿಹೇಳಿದರು.

ದೇಶದ ವಿವಿಧ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿದ್ದರೂ ಮಹಿಳಾ ಮೀಸಲಾತಿ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷರು ಸೇರಿದಂತೆ ಸುಮಾರು ಹತ್ತು ಮಹಿಳಾ ಪದಾಧಿಕಾರಿಗಳಿದ್ದು, ಪುರುಷ ಪದಾಧಿಕಾರಿಗಳ ಸಂಖ್ಯೆಯೂ ಸಮಾನ ಪ್ರಮಾಣದಲ್ಲಿದೆ. ಇದೇ ಮಾದರಿಯನ್ನು ಜಿಲ್ಲಾ ಹಾಗೂ ರಾಜ್ಯ ಘಟಕಗಳಲ್ಲಿಯೂ ಅನುಸರಿಸಬೇಕು ಎಂದು ಹೇಳಿದರು.

ಒಂಬತ್ತನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದ ‘ಕಾವ್ಯ ಕಳಸ’ ಸ್ಮರಣ ಸಂಚಿಕೆಯಲ್ಲಿ ಬಹುತೇಕ ಕವನಗಳನ್ನು ಕವಯಿತ್ರಿಯರು ರಚಿಸಿರುವುದು ಸಂತಸದ ಬೆಳವಣಿಗೆ. ‘ಸಾಸಿವೆ ಕಾಳು’ ಸ್ಮರಣ ಸಂಚಿಕೆಯಲ್ಲಿಯೂ ಸಾಹಿತ್ಯದ ಶ್ರೀಮಂತಿಕೆ ಕಾಣುತ್ತದೆ. ಇಂತಹ ಸಾಹಿತ್ಯಕ ಚಟುವಟಿಕೆಗಳಿಗೆ ಕಾರಣರಾದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಿವಲೀಲಾ ಎಸ್. ಕಲಗುರ್ಕಿ ಅವರನ್ನು ಅಭಿನಂದಿಸಿದರು.

1995ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಆದರೆ, ಮುಂದಿನ ಬಾರಿ ಮಹಿಳೆಗೆ ಅವಕಾಶ ನೀಡುವ ಭರವಸೆಯೊಂದಿಗೆ ಪಿ.ಎಂ. ಮಣ್ಣೂರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆ ಭರವಸೆ ಈಡೇರಲಿಲ್ಲ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಈವರೆಗೆ ಮಹಿಳೆಯರು ಅಧ್ಯಕ್ಷರಾಗಿಲ್ಲ ಎಂದು ಚಿನಿವಾರ್ ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ಸಾಹಿತ್ಯ, ಶಿಕ್ಷಣ ಮತ್ತು ಸಂಘಟನಾತ್ಮಕ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶ ನೀಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರ ಕಾರ್ಯವೈಖರಿಯನ್ನು ಉಲ್ಲೇಖಿಸಿದ ಅವರು, ಮುಂದಿನ ಅವಧಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳ ಹುದ್ದೆಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವುದರ ಜತೆಗೆ ಪದಾಧಿಕಾರಿಗಳ ಸ್ಥಾನಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಸಾರ್ಥಕ ಶಿಕ್ಷಕ ಪ್ರಶಸ್ತಿಯನ್ನು ಕೇವಲ ತಾಲ್ಲೂಕಿಗೆ ಸೀಮಿತಗೊಳಿಸದೆ ರಾಜ್ಯ, ಕಲ್ಯಾಣ ಕರ್ನಾಟಕ, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿಯೂ ವಿಸ್ತರಿಸಬೇಕು. ಹಿರಿಯ ಶಿಕ್ಷಕರ ದೀರ್ಘಕಾಲದ ಸೇವೆಯನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ನೀಡಬೇಕು. ಮಹಿಳಾ ಶಿಕ್ಷಕರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದರಿಂದ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅವರ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ ಎಂದು ಹೇಳಿದರು.

ಗುರು-ಶಿಷ್ಯರ ಸಂಬಂಧ ಪವಿತ್ರ: ಕಲ್ಯಾಣಕುಮಾರ್ ಶೀಲವಂತ್

ಸಮಾರಂಭ ಉದ್ಘಾಟಿಸಿದ ಶೈಕ್ಷಣಿಕ ಚಿಂತಕ ಕಲ್ಯಾಣಕುಮಾರ್ ಶೀಲವಂತ್ ಮಾತನಾಡಿ, ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು. ಎಲ್ಲರೂ ಮಾಜಿ ಆಗಬಹುದು; ಆದರೆ ಶಿಕ್ಷಕರು ಎಂದಿಗೂ ಮಾಜಿ ಶಿಕ್ಷಕರಾಗುವುದಿಲ್ಲ. ಶಿಕ್ಷಕರು ಸಮಾಜದ ನಿರ್ಮಾತೃಗಳು ಎಂದು ಹೇಳಿದರು.

1994ರಲ್ಲಿ ರಾಷ್ಟ್ರಪತಿಯಾಗಿದ್ದ ಶಂಕರ ದಯಾಳ್ ಶರ್ಮಾ ಅವರು ಓಮನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜರು ಸ್ವತಃ ಕಾರು ಚಲಾಯಿಸಿ ಅವರನ್ನು ಕರೆದುಕೊಂಡು ಹೋದ ಪ್ರಸಂಗವನ್ನು ವಿವರಿಸಿದರು. ತಾವು ಶಂಕರ ದಯಾಳ್ ಶರ್ಮಾ ಅವರ ಶಿಷ್ಯರಾಗಿದ್ದ ಕಾರಣ ಗುರುಭಕ್ತಿಯಿಂದ ಈ ಗೌರವ ಸಲ್ಲಿಸಿದ್ದಾಗಿ ರಾಜರು ತಿಳಿಸಿದ್ದರು ಎಂದು ಅವರು ಹೇಳಿದರು.

ಶಿಕ್ಷಕರು ಕೇವಲ ಮಾಹಿತಿ ನೀಡುವವರಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವವರಾಗಿದ್ದಾರೆ. ಆದರೆ, ಪ್ರಸ್ತುತ ಶಿಕ್ಷಕರಿಗೆ ಬೋಧನೆಯ ಹೊರತಾದ ಹಲವು ಕೆಲಸಗಳನ್ನು ವಹಿಸುವುದರಿಂದ ಪಾಠಪ್ರವಚನಕ್ಕೆ ಅಡಚಣೆಯಾಗುತ್ತಿದೆ. ಶಿಕ್ಷಕರನ್ನು ಅನಗತ್ಯ ಕೆಲಸಗಳಿಂದ ಮುಕ್ತಗೊಳಿಸಿ ಬೋಧನೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.

ಶಿಕ್ಷಕರು ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲಿಯೂ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿ ತಾಲ್ಲೂಕಿನ ಅಥರ್ಗಾದ ಶಿಕ್ಷಕ ರೇವಣಸಿದ್ಧ ಅವರು ರಥ ನಿರ್ಮಿಸಿ, ಗ್ರಾಮದಲ್ಲಿ ವಾರ್ಷಿಕ ಜಾತ್ರೆ ನಡೆಯಲು ಕಾರಣರಾಗಿರುವುದನ್ನು ಉದಾಹರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸಂಸ್ಥಾಪಕ ಬಸವರಾಜ್ ಕೋನೆಕ್ ಮಾತನಾಡಿ, ಶಿಕ್ಷಕರು ಜ್ಞಾನಾರ್ಜನೆಯ ಜತೆಗೆ ಸಾಮಾಜಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಅಕ್ಟೋಬರ್ 27 ಮತ್ತು 28ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಅಕ್ಟೋಬರ್ 27 ಮತ್ತು 28ರಂದು ಕನ್ನಡ ಭವನದಲ್ಲಿ ಏಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದ್ದು, ಇನ್ನೂ ಮೂರು ತಾಲ್ಲೂಕುಗಳಲ್ಲಿ ಸಮ್ಮೇಳನಗಳನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ 11 ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಗಳ ಪೈಕಿ ಐದು ತಾಲ್ಲೂಕುಗಳಲ್ಲಿ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ. ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಅವುಗಳನ್ನು ಚುನಾವಣೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಿವಲೀಲಾ ಎಸ್. ಕಲಗುರ್ಕಿ ಮಾತನಾಡಿ, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಪ್ರೇರಣೆಯಿಂದಲೇ ತಾವು ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಹಿರಿಯ ಸಾಹಿತಿ ಮುಡುಬಿ ಗುಂಡೇರಾವ್ ಅವರು ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮತ್ತೊಂದು ಅವಧಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲಿ ಎಂದು ಹಾರೈಸಿದರು.

15 ಶಿಕ್ಷಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ 2026ನೇ ಸಾಲಿನ ಸಾರ್ಥಕ ಶಿಕ್ಷಕ ಪ್ರಶಸ್ತಿಯನ್ನು ಅಣವೀರಪ್ಪ ಹರಸೂರ್, ಸೂರ್ಯಕಾಂತ್ ಎಂ. ಜಮಾದಾರ್, ಕಲ್ಲಪ್ಪ ಟಿ. ಒಗ್ಗೆರ, ಶಿವಲಿಂಗಮ್ಮ ಝ. ಕಾವಳೆ, ಶಿವಾನಂದ ಪಾಸೋಡಿ, ಸಂಜೀವಕುಮಾರ್ ಫಿರಂಗಿ, ಶರಣಮ್ಮ ಶಾಂತಯ್ಯ ಬೀದಿಮನಿ, ಶಿವಲೀಲಾ ಪಾಟೀಲ್, ಸುಮತ್ರಾದೇವಿ ವಗ್ಗೆ, ಸೈಯದಾ ಫರ್ಜಾನಾ ಫರಹತ್, ವಿಜಯಲಕ್ಷ್ಮಿ ಕಣ್ಣಿ, ವಿಜಯಲಕ್ಷ್ಮಿ ಗುರುಮಿಠಕಲ್, ಅಶೋಕ್, ಗಾಯತ್ರಿ ಬಿರಾದಾರ್ ಹಾಗೂ ಗುಂಡಮ್ಮ ಅ. ಸುಗೂರ್ ಅವರಿಗೆ ಪ್ರದಾನ ಮಾಡಲಾಯಿತು.

ಗೌರವ ಕಾರ್ಯದರ್ಶಿ ವಿಶಾಲಾಕ್ಷಿ ಮಾಯಣ್ಣವರ್ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ್ ಎಸ್. ಇಬ್ರಾಹಿಂಪೂರ್ ಸ್ವಾಗತಿಸಿದರು. ವೇದಿಕೆಯಲ್ಲಿ ಶಿವರಾಜ್ ಅಂಡಗಿ, ಧರ್ಮಣ್ಣ ಧನ್ನಿ, ಕುಪೇಂದ್ರ ಬರಗಾಲಿ, ಸೈಯದ್ ನಜೀರುದ್ದೀನ್ ಮುತವಲ್ಲಿ, ಧರ್ಮರಾಜ್ ಜವಳಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶರತಕುಮಾರ್ ಹಾಗರಗುಂಡಗಿ, ಜಯಶ್ರೀ ಕಾಳನೂರಕರ್, ಸುಭಾಷ ಸುಬೇದಾರ್, ಈರಣ್ಣ ಸೋನಾರ್, ಶೇಖ್ ಸಮ್ರಿನ್, ಕುಶಾಲ್ ದರ್ಗಿ, ಪ್ರಭಾವ ಪಟ್ಟಣಕರ್, ರೇವಯ್ಯಸ್ವಾಮಿ, ಡಾ. ರಾಜಶೇಖರ್ ಮಾಂಗ, ಗುಂಡಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button