ಕಾರ್ಮಿಕ ಸಂಹಿತೆಗಳ ಕಾರ್ಯಗಾರ: ಹೊಸ ಕಾರ್ಮಿಕ ಕಾನೂನುಗಳು ಜಾರಿ ನ್ಯಾಯಾಧೀಶ ಶ್ರೀನಿವಾಸ ನವಲೆ

ಕಲಬುರಗಿ. ಅಕ್ಟೋಬರ್ 12- ಕಾನೂನಿನಲ್ಲಿ ಹಿಂದೆ ಹಲವಾರು ಕಾರ್ಮಿಕ ಕಾಯ್ದೆಗಳಿದ್ದವು, ಆದರೆ 2024 ರಲ್ಲಿ ಅವುಗಳಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಮೂರು ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಅವರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ ಹೊಸ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ “ಕಾರ್ಮಿಕ ಸಂಹಿತೆಗಳ ಎರಡು ದಿನಗಳ ತರಬೇತಿ ಕಾರ್ಯಗಾರ” ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಐಪಿಸಿ, ಸಿಆರ್ಪಿಸಿ ಮತ್ತು ಇತರ ಕಾಯ್ದೆಗಳ ಬದಲಿಗೆ ಭಾರತೀಯ ದಂಡ ಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ಕಾರ್ಮಿಕರ ಹಳೆಯ ಕಾಯ್ದೆಯಲ್ಲಿದ್ದ 511 ಸೆಕ್ಷನ್ಗಳನ್ನು 358ಕ್ಕೆ ಇಳಿಸಿ ಸೆಕ್ಷನ್ಗಳನ್ನು ಕಡಿಮೆ ಮಾಡಲಾಗಿದೆ ಎಂದ ಅವರು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವುದು, ಅವರ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಯಾವುದೇ ಅನಗತ್ಯ ತೊಂದರೆಯಾಗದಂತೆ ಕಾನೂನುಗಳ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡು ಜಾರಿಗೆ ತಂದಿರುವುದರ ಮುಖ್ಯ ಉದ್ದೇಶವಾಗಿದೆ.
ಹೊಸ ಕಾಯ್ದೆಗಳು ಮತ್ತು ತಿದ್ದುಪಡಿಗಳ ಬಗ್ಗೆ ವಕೀಲರು ಹಾಗೂ ನ್ಯಾಯಾಧೀಶರು ಸಂಪೂರ್ಣವಾಗಿ ತಿಳಿದುಕೊಂಡು, ಅವುಗಳ ಸರಿಯಾದ ಅರ್ಥ ವಿವರಣೆಯನ್ನು ನೀಡಬೇಕಾದ ಜವಾಬ್ದಾರಿಯಿದೆ. ಯಾವುದೇ ಕಾನೂನು ತಂದಾಗ ಅದು ಸಂವಿಧಾನದ ಆಶಯಗಳಿಗೆ ಮತ್ತು ಕಾರ್ಮಿಕರ ಹಕ್ಕುಗಳಿಗೆ ಅನುಗುಣವಾಗಿರಬೇಕು. ಕೇವಲ ಕಾನೂನು ಜಾರಿಗೆ ತಂದರೆ ಸಾಲದು, ಅದರ ಹಿಂದಿನ ಉದ್ದೇಶವನ್ನು ಮತ್ತು ಸರಿಯಾದ ಅರ್ಥವನ್ನು ಎಲ್ಲರು ತಿಳಿದುಕೊಳ್ಳುವುದು ಮುಖ್ಯ ಎಂದರು.
ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಡಾ. ವೆಂಕಟೇಶ ಶಿಂದಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಹಳೆಯ ಕಾನೂನುಗಳನ್ನು ಸರಳೀಕರಿಸಿ ಸಮಿತಿಗಳ ರೂಪದಲ್ಲಿ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿದೆ. ವೇತನ ಕೋಡ್, ಸಾಮಾಜಿಕ ಭದ್ರತಾ ಕೋಡ, ಔದ್ಯೋಗಿಕ ಸುರಕ್ಷತೆ ಹಾಗೂ ಕೈಗಾರಿಕಾ ಸಂಬಂಧಗಳ ಕೋಡ ಎಂಬ ನಾಲ್ಕು ಪ್ರಮುಖ ಕೋಡಗಳನ್ನು ಜಾರಿಗೆ ತರಲಾಗಿದೆ. ದೇಶದ ನೂರಕ್ಕೂ ಹೆಚ್ಚು ಕಾರ್ಮಿಕ ಕಾನೂನುಗಳನ್ನು ಕ್ರೋಢೀಕರಿಸಿ, ಅಸಂಘಟಿತ ವಲಯದ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಕಲಬುರಗಿ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪಿ. ವಿಲಾಸ ಕುಮಾರ ಮಾತನಾಡಿ ಹೈಕೋರ್ಟ ಮತ್ತು ಜಿಲ್ಲಾ ಕೋರ್ಟಗಳಲ್ಲಿ ಪ್ರಾದೇಶಿಕ ಭಾಷೆ ಕನ್ನಡವನ್ನು ಬಳಸಬೇಕು ಮತ್ತು ಮಾತನಾಡುವಾಗಲೂ ಮಾತೃಭಾಷೆಗೆ ಆದ್ಯತೆ ನೀಡಬೇಕು ಹಾಗೂ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಿಗೆ ಕಾರ್ಮಿಕ ಕಾನೂನುಗಳ ಬಗ್ಗೆ ಸರಿಯಾದ ಪರಿಜ್ಞಾನವಿರುವ ನ್ಯಾಯಾಧೀಶರ ಅವಶ್ಯಕತೆಯಿದೆ ಎಂದರು.
ಕಾರ್ಮಿಕ ನ್ಯಾಯಾಲಯಗಳ ಕೊರತೆ ಹಾಗೂ ಅಕ್ರಮ ನೇಮಕಾತಿಯಲ್ಲಿ ಉಂಟಾಗುತ್ತಿರುವ ಗೊಂದಲಗಳು ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದ ಅವರು ಉಮಾದೇವಿ ಪ್ರಕರಣದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದ್ದು, ಕಾನೂನುಬದ್ಧವಾಗಿ ನೇಮಕಗೊಂಡ ನೌಕರರ ಹಿತಾಸಕ್ತಿ ಕಾಪಾಡುವುದು ಮುಖ್ಯ. ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳು (ಲೇಬರ್ ಕೋರ್ಟ್) ಇಲ್ಲದಿರುವ ಕಡೆಗಳಲ್ಲಿ ಅವುಗಳನ್ನು ಸ್ಥಾಪಿಸುವುದು ಹಾಗೂ ಎಲ್ಲರಿಗೂ ಸುಲಭವಾಗಿ ನ್ಯಾಯ ದೊರೆಯುವಂತೆ ಮಾಡುವುದು ಮತ್ತು ಸಂವಿಧಾನದ ಅಡಿಯಲ್ಲಿ ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು ಮತ್ತು ಅವುಗಳ ಅನುಷ್ಠಾನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ ಬಷೀರ್ ಅನ್ಸಾರಿ, ದಾವಣಗೆರೆ ವಿಭಾಗದ ಸಹಾಯಕ ಆಯುಕ್ತರಾದ ಡಾ. ಅವಿನಾಶ ನಾಯ್ಕ, ಕಲಬುರಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ಕಲಬುರಗಿ ಕಟ್ಟಡ ಕಾರ್ಮಿಕರ ಜಂಟಿ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭು ಯಳಸಂಗಿ, ಕಲಬುರಗಿ ಸಿ.ಐ.ಟಿ.ಯು. ಅಧ್ಯಕ್ಷ ಶ್ರೀಮಂತ ಜಮಾದಾರ ಸೇರಿದಂತೆ ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯ ಎಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕ ಸಂತೋಷ್ ಕುಲಕರ್ಣಿ ನಿರೂಪಿಸಿದರು, ಹರಿದಾಸ್ ದೇಶಪಾಂಡೆ ಸ್ವಾಗತಿಸಿದರು ಹಾಗೂ ಹಿರಿಯ ಕಾರ್ಮಿಕ ನಿರ್ದೇಶಕ ರವೀಂದ್ರ ಬಲ್ಲೂರ ವಂದಿಸಿದರು.



