ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಶಾಂತಿಯುತ ಮತದಾನಕ್ಕೆ ಸಿದ್ಧತೆ

ಕಲಬುರಗಿ, ಅ.7: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕ್ಷೇತ್ರದಾದ್ಯಂತ ಶಾಂತಿಯುತ ಹಾಗೂ ಮುಕ್ತ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಸೂಚಿಸಿದರು.ಬುಧವಾರ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ಷೇತ್ರದ ವ್ಯಾಪ್ತಿಯ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಪ್ರಮುಖ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ಯಾವುದೇ ಭಯ ಅಥವಾ ಆತಂಕವಿಲ್ಲದೆ ಮತ ಚಲಾಯಿಸಲು ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈಗಾಗಲೇ 2025ರ ಡಿಸೆಂಬರ್ 30ರಂದು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 29ರವರೆಗೆ ಸ್ವೀಕರಿಸಲಾದ ನಮೂನೆ-19ರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದರು.ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.
ಮತದಾನ ದಿನದಂದು ಅಗತ್ಯವಿರುವ ನಮೂನೆಗಳು, ಲಕೋಟೆಗಳು ಹಾಗೂ ಸ್ಟೇಷನರಿ ಸಾಮಗ್ರಿಗಳನ್ನು ಮಸ್ಟರಿಂಗ್ ದಿನದಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗೆ ಒದಗಿಸಬೇಕು ಎಂದು ಸೂಚಿಸಿದರು.ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ನಿಗಾಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರದ ಪ್ರತಿ ಮತಗಟ್ಟೆಯ ಮೇಲೆ ನಿಗಾ ಇರಿಸಲು ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಬೇಕು.
ಮೈಕ್ರೋ ವೀಕ್ಷಕರು ಹಾಗೂ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗೆ ಅಕ್ಟೋಬರ್ 12 ಮತ್ತು 17ರಂದು ಎರಡು ಹಂತಗಳಲ್ಲಿ ತರಬೇತಿ ನೀಡಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಅ.21ರಿಂದ ಶುಷ್ಕ ದಿನಮತದಾನ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪ್ರಜಾ ಪ್ರತಿನಿಧಿತ್ವ ಕಾಯ್ದೆ-1951ರ ಸೆಕ್ಷನ್ 135(ಸಿ)ರನ್ವಯ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ, ಅಂದರೆ ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಶುಷ್ಕ ದಿನ (Dry Day)’ ಜಾರಿಗೊಳಿಸುವಂತೆ ಎಲ್ಲಾ ಜಿಲ್ಲೆಗಳಲ್ಲಿ ಆದೇಶ ಹೊರಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಸಹಾಯಕ ಚುನಾವಣಾಧಿಕಾರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬೇನ್ ಮೋಹಪಾತ್ರ, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಹಾಗೂ ಪ್ರಭಾರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಪ್ರಮೀಳಾ ಎಂ.ಕೆ., ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಏಳು ಜಿಲ್ಲೆಗಳ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.



