ಅಪರಾಧಜಿಲ್ಲಾಸುದ್ದಿ

ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಅವಘಡ: ಯುವಕ ದುರ್ಮರಣ

ಬೀದರ್, ಅ.3- ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಗ್ರಾಮದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಮೃತ ಯುವಕನನ್ನು ಮಂಠಾಳ ಗ್ರಾಮದ ಅಮಿತ್ (19) ಎಂದು ಗುರುತಿಸಲಾಗಿದೆ. ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನಿಲ್ ರಘಟೆ ಅವರಿಗೆ ಸೇರಿದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪೆಟ್ರೋಲ್ ಬಂಕ್ ಕಟ್ಟಡದ ಮೇಲಿದ್ದ ಸೋಲಾರ್ ಮೇಲ್ಛಾವಣಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಅಮಿತ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸುವ ಕೆಲಸ ಸೇರಿದಂತೆ ಇತರ ಕೆಲಸಗಳಿಗೆ ಯುವಕನನ್ನು ಬಳಸಿಕೊಂಡು, ಸುರಕ್ಷತಾ ಕ್ರಮಗಳಿಲ್ಲದೆ ಸೋಲಾರ್ ಮೇಲ್ಛಾವಣಿ ತೆರವುಗೊಳಿಸುವ ಕೆಲಸಕ್ಕೆ ಕಳುಹಿಸಲಾಗಿತ್ತು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button