ಜಿಲ್ಲಾಸುದ್ದಿ

ದಸರಾ ರಜೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ, ಅ.3- ರಾಜ್ಯ ಸರ್ಕಾರ ಅ.3ರಿಂದ ಅ.21ರವರೆಗೆ ಘೋಷಿಸಿರುವ ದಸರಾ ರಜೆಯನ್ನು ಉಲ್ಲಂಘಿಸಿ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸರ್ಕಾರ ಘೋಷಿಸಿರುವ ರಜೆಯ ಆದೇಶವನ್ನು ಎಲ್ಲ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕರ್ನಾಟಕ ಸರ್ಕಾರ ಅ.3ರಿಂದ 21ರವರೆಗೆ ರಾಜ್ಯದ ಶಾಲಾ-ಕಾಲೇಜುಗಳಿಗೆ ದಸರಾ ರಜೆ ಘೋಷಿಸಿದೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ರಜೆ ಆದೇಶದ ಆಶಯಕ್ಕೆ ವಿರುದ್ಧವಾಗಿ ರಜೆ ಅವಧಿಯಲ್ಲಿಯೂ ಶಾಲಾ ಚಟುವಟಿಕೆ ಹಾಗೂ ಪರೀಕ್ಷೆಗಳನ್ನು ನಡೆಸುತ್ತಿರುವ ಕುರಿತು ದೂರುಗಳು ಮತ್ತು ಮಾಹಿತಿಗಳು ಲಭ್ಯವಾಗುತ್ತಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ದಸರಾ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಪರಂಪರೆ ಹಾಗೂ ನಾಡಿನ ಐತಿಹಾಸಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ರಜೆ ನೀಡುವ ಉದ್ದೇಶ ವಿದ್ಯಾರ್ಥಿಗಳು ಕುಟುಂಬದೊಂದಿಗೆ ಸಮಯ ಕಳೆಯುವುದರ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಲು ಅವಕಾಶ ಕಲ್ಪಿಸುವುದಾಗಿದೆ ಎಂದು ಅವರು ಹೇಳಿದರು.

ಆದರೆ ರಜೆ ಅವಧಿಯಲ್ಲಿಯೇ ಪರೀಕ್ಷೆಗಳು, ತರಗತಿಗಳು ಅಥವಾ ಇತರ ಕಡ್ಡಾಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಶೈಕ್ಷಣಿಕ ಒತ್ತಡ ಉಂಟಾಗುತ್ತದೆ. ಇದರಿಂದ ರಜೆಯ ಉದ್ದೇಶವೇ ದುರ್ಬಲವಾಗುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸರ್ಕಾರದ ಆದೇಶವನ್ನು ಯಾವುದೇ ಶಾಲೆಯು ತನ್ನ ಇಚ್ಛೆಯಂತೆ ನಿರ್ಲಕ್ಷಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯುವುದು ಅಥವಾ ಪರೀಕ್ಷೆ ನಡೆಸುವುದು ನಡೆಯದಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸರ್ಕಾರ ಘೋಷಿಸಿರುವ ದಸರಾ ರಜೆ ಅವಧಿಯಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ತಕ್ಷಣ ಪರಿಶೀಲಿಸಬೇಕು. ರಜೆ ಅವಧಿಯಲ್ಲಿ ಪರೀಕ್ಷೆ, ತರಗತಿ ಅಥವಾ ಇತರ ಕಡ್ಡಾಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ದೂರುಗಳ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಶಾಲೆಗಳ ಹಾಜರಾತಿ ದಾಖಲೆ, ಪರೀಕ್ಷಾ ವೇಳಾಪಟ್ಟಿ, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶ ಪತ್ತೆಹಚ್ಚಬೇಕು. ಕೈಗೊಂಡ ಕ್ರಮದ ಕುರಿತು ದೂರುದಾರರಿಗೆ ಲಿಖಿತ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರದ ಆದೇಶಗಳು ಕೇವಲ ಕಾಗದದ ಆದೇಶಗಳಾಗಿ ಉಳಿಯದೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನವಾಗಿ ಜಾರಿಯಾಗುವಂತೆ ಶಿಕ್ಷಣ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆದೇಶ ಉಲ್ಲಂಘಿಸುವ ಯಾವುದೇ ಶಿಕ್ಷಣ ಸಂಸ್ಥೆಗೆ ವಿನಾಯಿತಿ ನೀಡದೆ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಿವಕುಮಾರ್ ಸಾಗರ, ಮಹೇಶ್ ಕೆಂಭಾವಿ, ರಾಜು ವಾಘಮೊರೆ, ಉದಯ ಸುಲ್ತಾನಪುರ, ವೀರೇಶ್ ಬಿಂಗೆ, ಚನ್ನವೀರ ಸಿಂಗಿ, ಸಂಗಮೇಶ್ ಕಾಳಗನೂರು, ಪ್ರಶಾಂತ್ ಸಿರೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button