ತೂಕದಲ್ಲಿ ಮೋಸ: ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್, ಅ.3- ಜಿಲ್ಲೆಯಲ್ಲಿ ಪಡಿತರ ಅಕ್ಕಿ ವಿತರಿಸುವ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕದಲ್ಲಿ ಅಕ್ಕಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ವೀರ ಕನ್ನಡಿಗರ ಸೇನೆಯ ತಾಲ್ಲೂಕು ಅಧ್ಯಕ್ಷ ಗೌಸೋದ್ದೀನ್ ಯಾಕತಪುರ ಒತ್ತಾಯಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಕೆಲವು ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರದ ಪಡಿತರ ಅಕ್ಕಿ ಹಾಗೂ ಇತರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೆ ಕೆಲವು ಅಂಗಡಿಗಳಲ್ಲಿ ತೂಕದಲ್ಲಿ ಕಡಿಮೆ ಮಾಡಿ ಅಕ್ಕಿ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಫಲಾನುಭವಿಗಳು ಮನೆಗೆ ತೆರಳಿ ಪಡಿತರವನ್ನು ಮರುತೂಕ ಮಾಡಿದಾಗ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಆದ್ದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ತಪ್ಪಿತಸ್ಥ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರ ಬಡವರ ಹಸಿವು ನೀಗಿಸಲು ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಅಕ್ಕಿ ನೀಡುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಐದು ಕಿಲೊ ಅಕ್ಕಿ ನೀಡಬೇಕಾದ ಸಂದರ್ಭದಲ್ಲಿ ಅರ್ಧ ಕಿಲೊದಷ್ಟು ಕಡಿಮೆ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಹತ್ತು ಕಿಲೊ ಅಕ್ಕಿಗೆ ಒಂದು ಕಿಲೊದಷ್ಟು ಕಡಿಮೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಗೌಸೋದ್ದೀನ್ ತಿಳಿಸಿದ್ದಾರೆ.
ಇದಲ್ಲದೆ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅಂತರ್ಜಾಲ ದತ್ತಾಂಶ ವ್ಯವಸ್ಥೆಯ ಸೌಲಭ್ಯವನ್ನು ಬಳಸಿಕೊಂಡು ಫಲಾನುಭವಿಗಳ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾರ್ವಜನಿಕರು ತಮ್ಮ ಕೂಲಿ ಕೆಲಸವನ್ನು ಬಿಟ್ಟು, ಆಹಾರ ಇಲಾಖೆಯ ಸೂಚನೆಯಂತೆ ಬೆಳಿಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕುಳಿತು ಪಡಿತರ ಪಡೆಯಲು ಕಾಯಬೇಕಾದ ಪರಿಸ್ಥಿತಿ ಇದೆ. ಈ ವ್ಯವಸ್ಥೆಯಲ್ಲಿ ಫಲಾನುಭವಿಗಳಿಗೆ ಅನಗತ್ಯ ತೊಂದರೆ ಉಂಟಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು ತಕ್ಷಣ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಬೇಕು. ಪಡಿತರ ಹಾಗೂ ಹೊಸ ಪಡಿತರ ಚೀಟಿ ನೀಡುವ ಹೆಸರಿನಲ್ಲಿ ಫಲಾನುಭವಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿ ಮಾಲೀಕರು, ಮಧ್ಯವರ್ತಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗೌಸೋದ್ದೀನ್ ಎಚ್ಚರಿಸಿದ್ದಾರೆ.



