ಖೋ-ಖೋ ಹಾಗೂ ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಹಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಅಫಜಲಪುರ, ಸೆ.28: ತಾಲ್ಲೂಕಿನ ಮಹಾಂತಪುರದ ಶ್ರೀ ಮಹಾಂತ ಜ್ಯೋತಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮಹಾಂತೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಖೋ-ಖೋ ಹಾಗೂ ಕಬಡ್ಡಿ ಕ್ರೀಡೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ ಹಾಗೂ ಶ್ರೀಮತಿ ಮಹಾಂತಮ್ಮ ಪಾಟೀಲ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಅಫಜಲಪುರದಲ್ಲಿ ಶನಿವಾರ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಮಹಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಖೋ-ಖೋ ಹಾಗೂ ಕಬಡ್ಡಿ ಪಂದ್ಯಗಳಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದರು. ಬಾಲಕರ ವಿಭಾಗದಲ್ಲಿ ಖೋ-ಖೋ ಹಾಗೂ ಥ್ರೋಬಾಲ್ ಪಂದ್ಯಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಗ್ರಾಮೀಣ ಮಟ್ಟದಿಂದ ಬಂದಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕಾಯಕಾರ್ಯೋಗಿ ದಾಸೋಹಮೂರ್ತಿ ಸಿದ್ಧರಾಮ ಶಿವಾಚಾರ್ಯರು, ಶ್ರೀ ಮಹಾಂತೇಶ್ವರ ಮಠದ ಪೀಠಾಧಿಪತಿ ವೀರಮಹಾಂತ ಶಿವಾಚಾರ್ಯರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನಬಸಯ್ಯ ಹಿರೇಮಠ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುತ್ತಿರುವ ದೈಹಿಕ ಉಪನ್ಯಾಸಕ ಅಜಿತಕುಮಾರ ಭಕರೆ ಅವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು.



