
ಕಲಬುರಗಿ, ಸೆ.28: ನಗರದ ಸೂಪರ್ ಮಾರ್ಕೆಟ್ನ ಜವಳಿ ಕಾಂಪ್ಲೆಕ್ಸ್ನಲ್ಲಿರುವ ಹರಿದಾಸ್ ಹಾರ್ಟ್ ಆಸ್ಪತ್ರೆ ವತಿಯಿಂದ ಸೆ.29ರಂದು 5ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಹೃದಯ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಖ್ಯಾತ ಹೃದಯ ಮತ್ತು ಎದೆ ಶಸ್ತ್ರಚಿಕಿತ್ಸಕ ಡಾ. ಅರುಣಕುಮಾರ್ ಹರಿದಾಸ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕಂಡುಬರುವ ಕೆಲವು ಹೃದಯ ಕಾಯಿಲೆಗಳು ಜನ್ಮಜಾತ ಹೃದಯ ದೋಷಗಳಿಂದ ಉಂಟಾಗಬಹುದು. ಇವುಗಳಲ್ಲಿ ಕೆಲವು ಕಾಯಿಲೆಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾಗುತ್ತವೆ. ಆದರೆ ಕೆಲ ಮಕ್ಕಳಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದಿದ್ದರೂ ಹೃದಯ ಸಮಸ್ಯೆಗಳು ಪತ್ತೆಯಾಗದೆ ಉಳಿಯುವ ಸಾಧ್ಯತೆ ಇದೆ. ಹೀಗಾಗಿ ಪೋಷಕರು ಮಕ್ಕಳ ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದರು.
ಮಕ್ಕಳಲ್ಲಿ ಹೃದಯ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲಿಯೇ ಹೃದಯದ ದೋಷಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ವಿಶ್ವ ಹೃದಯ ದಿನದ ಅಂಗವಾಗಿ ಸೆ.29ರಂದು ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಉಚಿತ ಮಕ್ಕಳ ಹೃದಯ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ 5ರಿಂದ 15 ವರ್ಷದ ಮಕ್ಕಳಿಗೆ ವಿಶೇಷ ಹೃದಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಆಟವಾಡುವಾಗ ಬೇಗನೆ ದಣಿಯುವುದು, ಉಸಿರಾಟದ ತೊಂದರೆ, ಪದೇಪದೇ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವುದು, ತೂಕ ಸರಿಯಾಗಿ ಹೆಚ್ಚಾಗದಿರುವುದು, ತುಟಿ ಅಥವಾ ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುವುದು, ತಲೆಸುತ್ತುವುದು ಹಾಗೂ ಮೂರ್ಛೆ ಹೋಗುವಂತಹ ಲಕ್ಷಣಗಳು ಕಂಡುಬಂದರೆ ಪೋಷಕರು ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಕರೆತರಬಹುದು ಎಂದು ಹೇಳಿದರು.
ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದಿದ್ದರೂ ಹೃದಯದ ದೋಷಗಳು ಇರುವ ಸಾಧ್ಯತೆ ಇರುವುದರಿಂದ ಅಗತ್ಯವಿರುವ ಮಕ್ಕಳಿಗೆ ವೈದ್ಯಕೀಯ ತಪಾಸಣೆಯ ಜೊತೆಗೆ ಎಕೋಕಾರ್ಡಿಯೋಗ್ರಫಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಶಿಬಿರದಲ್ಲಿ ವೈದ್ಯರು ಮಕ್ಕಳಿಗೆ ಉಚಿತ ವೈದ್ಯಕೀಯ ಸಮಾಲೋಚನೆ ನೀಡಲಿದ್ದಾರೆ ಎಂದು ತಿಳಿಸಿದರು.
‘ಮಗುವಿನ ಹೃದಯದ ಆರೋಗ್ಯವೇ ಮಗುವಿನ ಆರೋಗ್ಯಕರ ಭವಿಷ್ಯ’ ಎಂಬ ಸಂದೇಶದೊಂದಿಗೆ ಆಯೋಜಿಸಿರುವ ಈ ಶಿಬಿರದ ಸದುಪಯೋಗವನ್ನು ಪೋಷಕರು ಪಡೆದುಕೊಂಡು ಮಕ್ಕಳ ಹೃದಯ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ಅರುಣಕುಮಾರ್ ಹರಿದಾಸ್ ಮನವಿ ಮಾಡಿದರು.



