ಬರ ಪರಿಹಾರದ ಮೊತ್ತ ₹2,500ರಿಂದ ₹25 ಸಾವಿರಕ್ಕೆ ಹೆಚ್ಚಿಸಲು ದಯಾನಂದ ಪಾಟೀಲ ಆಗ್ರಹ
ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಸಮರ್ಪಕ ಪರಿಹಾರ ನೀಡಬೇಕು: ನವ ಕರ್ನಾಟಕ ರೈತ ಸಂಘ

ಕಲಬುರಗಿ, ಸೆ.28: ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ರೈತರಿಗೆ ಕೇವಲ ₹2,500 ನೀಡುವುದಾಗಿ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಈ ಮೊತ್ತವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬರಗಾಲ ಘೋಷಣೆ ಮಾಡಿದ ಮಾತ್ರಕ್ಕೆ ಸಾಲದು. ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಭೇದ ಮರೆತು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವಿದೇಶಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ತ್ವರಿತವಾಗಿ ಸ್ಪಂದಿಸಿ ನೆರವು ನೀಡುತ್ತದೆ. ಆದರೆ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು. ಬರದ ಕುರಿತು ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಮೌನ ವಹಿಸಿರುವುದನ್ನು ಖಂಡಿಸಿದರು.
ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ
ವಿಶೇಷ ಅಧಿವೇಶನದಲ್ಲಿ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಅವರು ವಿರೋಧ ಪಕ್ಷಗಳಿಗೆ ಬಹಿರಂಗವಾಗಿ ಕರೆ ನೀಡಿದ್ದರು. ಆದರೆ ವಿರೋಧ ಪಕ್ಷಗಳ ಮುಖಂಡರು ಮೌನ ವಹಿಸಿರುವುದು ಖಂಡನೀಯ ಎಂದು ದಯಾನಂದ ಪಾಟೀಲ ಹೇಳಿದರು.
ಕೇಂದ್ರ ಸರ್ಕಾರ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲು ಮುಂದಾಗುತ್ತದೆ. ಆದರೆ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ಮನ್ನಾ ಹಾಗೂ ಸಾಲ ಮರುಪಾವತಿ ವಿಸ್ತರಣೆಗೆ ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ ವಿದೇಶಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ನೆರವು ನೀಡುತ್ತದೆ. ಅದೇ ರೀತಿಯಲ್ಲಿ ಕರ್ನಾಟಕದ ಬರ ಪರಿಸ್ಥಿತಿಗೂ ತಕ್ಷಣ ಸ್ಪಂದಿಸಬೇಕು. ಸರ್ಕಾರ ಕೂಡಲೇ ಗಂಜಿ ಹಾಗೂ ಮೇವಿನ ಕೇಂದ್ರಗಳನ್ನು ತೆರೆಯುವ ಮೂಲಕ ಸಂಕಷ್ಟದಲ್ಲಿರುವ ಜನರು ಹಾಗೂ ಜಾನುವಾರುಗಳಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮೂಲಕ ಪರಿಹಾರ ನೀಡಲಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮಾಡದೆ ತಕ್ಷಣ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಅಗತ್ಯ ಹಣ ಬಿಡುಗಡೆ ಮಾಡಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ದಯಾನಂದ ಪಾಟೀಲ ಒತ್ತಾಯಿಸಿದರು.
ಪರಿಹಾರ ನೀಡುವಲ್ಲಿ ವಿಳಂಬದ ಧೋರಣೆ ಮುಂದುವರಿದರೆ ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಅಗತ್ಯವಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಚೌಧರಿ ಹಾಗೂ ಯುವ ಘಟಕದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಉಪಸ್ಥಿತರಿದ್ದರು.



