ಜಿಲ್ಲಾಸುದ್ದಿ

ಬಸವಕಲ್ಯಾಣ ಅನುಭವ ಮಂಟಪದ ನಿರ್ವಹಣೆ ಶಿವಾನಂದ ಜಮಾದಾರ್‌ಗೆ ನೀಡುವ ಬೇಡಿಕೆಗೆ ವಿರೋಧ

ಕಲಬುರಗಿ, ಸೆ.26: ಬಸವಕಲ್ಯಾಣದ ಅನುಭವ ಮಂಟಪದ ನಿರ್ವಹಣೆಯನ್ನು ತಮಗೆ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಶಿವಾನಂದ ಜಮಾದಾರ್ ಅವರು ಮಾಡಿರುವ ಬೇಡಿಕೆಯನ್ನು ಬಸವಾಮೃತ ಗೋರಕ್ಷ ಶರಣರು ಖಂಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದ ಅನುಭವ ಮಂಟಪದ ನಿರ್ವಹಣೆಯನ್ನು ಅಲ್ಲಿನ ಮಠಾಧೀಶರಿಗೆ ಅಥವಾ ಸ್ಥಳೀಯ ಸಂಘ-ಸಂಸ್ಥೆಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಅನುಭವ ಮಂಟಪವು ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರ ಬಹುವರ್ಷಗಳ ಕನಸಿನ ಸಾಕಾರವಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಬಸವಲಿಂಗ ಪಟ್ಟದ್ದೇವರು ಹಾಗೂ ಹರಗುರುಗಳ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಗಣ್ಯರು ಸಹಕಾರ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಅನುಭವ ಮಂಟಪದ ನಿರ್ವಹಣೆಯನ್ನು ತಮ್ಮ ತೆಕ್ಕೆಗೆ ನೀಡಬೇಕು ಎಂದು ಶಿವಾನಂದ ಎಂ. ಜಮಾದಾರ್ ಅವರು ಕೇಳುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆ ಎಂಬ ಸಂಘಟನೆಯ ಹೆಸರಿದ್ದರೂ, ಅದರ ಕಾರ್ಯಕಾರಿಣಿಯಲ್ಲಿ ಕಲ್ಯಾಣ ಕರ್ನಾಟಕದವರ ಪ್ರಾತಿನಿಧ್ಯವಿಲ್ಲ. ಬಹುತೇಕವಾಗಿ ಬೆಳಗಾವಿ ಭಾಗದವರೇ ಇದ್ದಾರೆ ಎಂದು ಅವರು ಆರೋಪಿಸಿದರು.

ಕಲ್ಯಾಣ ಕರ್ನಾಟಕವು ಅಪಾರ ಖನಿಜ ಸಂಪನ್ಮೂಲ ಹೊಂದಿದ್ದರೂ ಈ ಭಾಗದ ಜನರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಅನುಭವ ಮಂಟಪದಂತಹ ಜ್ಞಾನಭಂಡಾರವನ್ನು ಸಹ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕಮ್ಯುನಿಸ್ಟ್ ಸಿದ್ಧಾಂತ ಬೆಳೆಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಶಿವಾನಂದ ಜಮಾದಾರ್ ವಿರುದ್ಧ ಅವರು ಆರೋಪ ಮಾಡಿದರು. ಬಸವ ಮತ್ತು ಶರಣರ ವಿಚಾರಧಾರೆ ಕುರಿತು ಕಲ್ಯಾಣ ಕರ್ನಾಟಕದ ಜನರಿಗೆ ಹೆಚ್ಚಿನ ಜ್ಞಾನವಿದೆ ಎಂದರು.

ನಗರದ ಶಹಾಬಜಾರ್‌ನಲ್ಲಿ ಕಳೆದ 21ರಿಂದ ನಿಜಗುಣಾನಂದ ಸ್ವಾಮೀಜಿಗಳ ಪ್ರವಚನ ನಡೆಯುತ್ತಿದ್ದು, ಯಾವುದೇ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿಲ್ಲ. ಸಂವಿಧಾನಬದ್ಧವಾಗಿ ಪ್ರವಚನ ನಡೆಸಲು ಅವಕಾಶ ನೀಡುವ ಮೂಲಕ ಲಿಂಗಾಯತರ ಘನತೆಯನ್ನು ಎತ್ತಿಹಿಡಿಯಲಾಗಿದೆ. ಆದರೆ, ದೇಶದಲ್ಲಿ ಸಾಧನೆ ಮಾಡಿದ ಕಾಡಸಿದ್ದೇಶ್ವರ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವುದು ಎಷ್ಟರ ಮಟ್ಟಿಗೆ ಸಂವಿಧಾನಬದ್ಧ ಎಂಬುದನ್ನು ಶಿವಾನಂದ ಜಮಾದಾರ್ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಲಿಂಗಾಯತ ಸಮುದಾಯದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಲಿಂಗಾಯತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದು, ಅವರನ್ನು ಊರಿನಿಂದ ಹೊರಹಾಕುವ ಪ್ರಯತ್ನಗಳು ನಡೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಕೃಷಿ ಭೂಮಿಗಳು ಸರ್ಕಾರ ಹಾಗೂ ಕಂಪನಿಗಳ ವಶವಾಗುತ್ತಿದ್ದು, ಲಿಂಗಾಯತರಿಗೆ ಸರ್ಕಾರಿ ಉದ್ಯೋಗಗಳಲ್ಲಿಯೂ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದರು.

ಬಸವಾದಿ ಶಿವಶರಣರ ಕಾಯಕ ತತ್ವದಂತೆ ಬದುಕಲು ಎಲ್ಲರೂ ಒಗ್ಗಟ್ಟಿನಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗದಂತೆ ಜೀವನ ನಡೆಸಬೇಕು ಎಂದು ಬಸವಾಮೃತ ಗೋರಕ್ಷ ಶರಣರು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಿವಲೀಲಾ ಹಿರೇಮಠ, ಸುನೀಲ್ ನಂದಿಕೋಲ್, ರೇಣುಕಾ ಹಿರೇಮಠ, ಜ್ಯೋತಿ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button