ಜಿಲ್ಲಾಸುದ್ದಿ

ಕಾಡಸಿದ್ದೇಶ್ವರ ಸ್ವಾಮಿ ಕಲಬುರಗಿ ಪ್ರವೇಶಕ್ಕೆ ಮಹೇಶ್ ಕೋಕಿಲೆ ವಿರೋಧ

ಜೇವರ್ಗಿ, ಸೆ.24: ಧರ್ಮಗಳ ನಡುವೆ ದ್ವೇಷದ ಭಾವನೆ ಮೂಡಿಸುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯ ಹೇಳಿಕೆ ಮತ್ತು ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಸೆ.27ರಂದು ಕಲಬುರಗಿಯಲ್ಲಿ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎನ್ನಲಾದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರು ನಗರ ಪ್ರವೇಶಿಸದಂತೆ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ತಾಲ್ಲೂಕು ಸಂಚಾಲಕ ಮಹೇಶ್ ಕೋಕಿಲೆ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನಗಳು ಹಾಗೂ ಹೇಳಿಕೆಗಳು ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಅವರ ಆಗಮನದಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶರಣರು ರಚಿಸಿದ ವಚನಗಳನ್ನು ತಿರುಚಿ ವ್ಯಾಖ್ಯಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬಸವಾದಿ ಶರಣರ ಸಮಾನತೆ, ಜಾತಿ ವಿರೋಧಿ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದರು. ಶರಣರ ವಿಚಾರಧಾರೆಗೆ ವಿರುದ್ಧವಾದ ರೀತಿಯಲ್ಲಿ ಅವರ ಹೆಸರನ್ನು ಬಳಸುವುದು ವಿರೋಧಾಭಾಸದ ಸಂಗತಿಯಾಗಿದೆ ಎಂದು ಹೇಳಿದರು.

ಶರಣರು ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ ಹಾಗೂ ಕರ್ಮಠ ಸಿದ್ಧಾಂತಗಳ ವಿರುದ್ಧ ಸಾಮಾಜಿಕ ಪರಿವರ್ತನೆಯ ಹೋರಾಟ ನಡೆಸಿದ್ದರು. ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿದ ಶರಣರ ಚಿಂತನೆಗಳನ್ನು ಇಂದಿನ ಕಾಲಘಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಬಸವಾದಿ ಶರಣರ ವಿಚಾರಗಳನ್ನು ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನೊಳಗೆ ಸೀಮಿತಗೊಳಿಸುವ ಪ್ರಯತ್ನಗಳು ಬಸವಾನುಯಾಯಿಗಳಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ. ಆದ್ದರಿಂದ ಎಲ್ಲ ಧರ್ಮಗಳ ನಡುವೆ ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಕೋಕಿಲೆ ಒತ್ತಾಯಿಸಿದರು.

ಕಾಡಸಿದ್ದೇಶ್ವರ ಸ್ವಾಮೀಜಿಯವರ ಕಲಬುರಗಿ ಪ್ರವೇಶವನ್ನು ವಿರೋಧಿಸಿ ಸೆ.25ರಂದು ಕಲಬುರಗಿ ಕನ್ನಡ ಭವನದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಸೆ.27ರಂದು ಸ್ವಾಮೀಜಿಯವರು ಕಲಬುರಗಿ ಪ್ರವೇಶಿಸುವ ಸಾಧ್ಯತೆ ಇರುವ ಪ್ರಮುಖ ರಸ್ತೆಗಳಲ್ಲಿ ಸಮಿತಿ ರಾಜ್ಯಾಧ್ಯಕ್ಷ ಅರ್ಜುನ ಭದ್ರೆ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ದಲಿತಪರ ಸಂಘಟನೆಗಳು, ಪ್ರಗತಿಪರರು, ಲಿಂಗಾಯತ ಸಮುದಾಯದ ಚಿಂತಕರು ಹಾಗೂ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ಸಜ್ಜನ್, ರಮೇಶ್ ಬಿರಾಳ್ (ಕೆ), ರಾಮು ಹುಲೂರು, ಶರಣು ಹರವಾಳ, ಭೀಮರಾಯ ಹರನಾಳ ಬಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button