ಜಿಲ್ಲಾಸುದ್ದಿ

ಪ್ರವಾಸೋದ್ಯಮ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ: ಪ್ರೊ. ಆರ್.ಆರ್. ಬಿರಾದಾರ

ಪರಂಪರೆ ನಡಿಗೆಗೆ ಚಾಲನೆ

ಕಲಬುರಗಿ, ಆ. 24: ಪ್ರವಾಸೋದ್ಯಮ ಕ್ಷೇತ್ರವು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿ ರೂಪುಗೊಂಡಿದೆ. ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬಹುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಆರ್.ಆರ್. ಬಿರಾದಾರ ಹೇಳಿದರು.


ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಕೋಟೆ ಆವರಣದಲ್ಲಿ ಆಯೋಜಿಸಿದ್ದ ‘ಪರಂಪರೆ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಸುಮಾರು 65 ಐತಿಹಾಸಿಕ ಪ್ರವಾಸಿ ತಾಣಗಳಿವೆ. ಅವುಗಳನ್ನು ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಸ್ವಚ್ಛತೆ ಮತ್ತು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯ ಎಂದು ಹೇಳಿದರು.


ದೇಶದ ಒಟ್ಟಾರೆ ಜಿಡಿಪಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪಾಲು ಶೇ 6ರಷ್ಟಿದೆ. ದೇಶದಾದ್ಯಂತ ಪ್ರತಿ ವರ್ಷ ಕೋಟ್ಯಂತರ ಪ್ರವಾಸಿಗರು ವಿವಿಧ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದ್ದು, ಪ್ರವಾಸೋದ್ಯಮವು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ ಎಂದು ಬಿರಾದಾರ ತಿಳಿಸಿದರು.
ಕೋಟೆಯಿಂದ ಶರಣಬಸವೇಶ್ವರ ದೇವಸ್ಥಾನದವರೆಗೆ ನಡಿಗೆ
ಕಲಬುರಗಿ ಕೋಟೆಯಿಂದ ಆರಂಭವಾದ ‘ಪರಂಪರೆ ನಡಿಗೆ’ಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಬೇಬಿ ಮೊಗೇರ್ ಚಾಲನೆ ನೀಡಿದರು. ವಿದ್ಯಾರ್ಥಿಗಳು ಕೋಟೆಯಲ್ಲಿರುವ ಜಾಮೀಯಾ ಮಸೀದಿ, ಉದ್ದದ ತೋಪು ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದರು. ಬಳಿಕ ಕೋಟೆಯಿಂದ ಕಾಲ್ನಡಿಗೆಯಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಸಾಗಿದರು.
ನಡಿಗೆಯುದ್ದಕ್ಕೂ ಇಂಟ್ಯಾಕ್ ಕಲಬುರಗಿ ಅಧ್ಯಾಯದ ಡಾ. ಶಂಭುಲಿಂಗ ವಾಣಿ ಅವರು ಕಲಬುರಗಿ ಕೋಟೆಯ ಇತಿಹಾಸ, ವಾಸ್ತುಶೈಲಿ, ವೈಶಿಷ್ಟ್ಯ ಹಾಗೂ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಪ್ರವಾಸಿ ಅಧಿಕಾರಿ ಅರುಣಕುಮಾರ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ಶಾಲೆಯ ಡೀನ್ ಪ್ರೊ. ಪಾಂಡುರಂಗ ಪಟ್ಟಿ, ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ಜಿ., ಪ್ರಾಧ್ಯಾಪಕಿ ಪ್ರೊ. ಅಂಕತಿ ರಘು, ಅಸೋಸಿಯೇಟ್ ಪ್ರೊಫೆಸರ್ ಡಾ. ಗೌತಮ್, ಸ್ವಚ್ಛತಾ ಹೀ ಸೇವಾ ಅಭಿಯಾನದ ಸಂಯೋಜಕ ಪ್ರೊ. ಗಣಪತಿ ಬಿ. ಸಿನ್ನೂರ್, ಕೆ.ಟಿ.ಎಫ್. ಕಲಬುರಗಿಯ ಸ್ಯಾಮಿವಲ್ ಸಂಧ್ಯಾರಾಜ್, ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಕಲ್ಯಾಣ ರಾವ್ ಪಾಟೀಲ್, ಎ.ಎಸ್.ಐ. ಅಧಿಕಾರಿ ನಂದಕುಮಾರ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button