1,400 ಕ್ರೀಡಾಪಟುಗಳ ಭಾಗಿ; ನಾಲ್ಕು ದಿನಗಳ ಕ್ರೀಡಾ ಸಮಾಗಮ

ಕಲಬುರಗಿ: ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಕಲಬುರಗಿ ಸ್ಪೋರ್ಟ್ಸ್ ಹಬ್ಬ–2026ಕ್ಕೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ ನೀಡಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಸಹಯೋಗದಲ್ಲಿ ಸರಳ ಸಮಾರಂಭ ನಡೆಯಿತು. ಸುಮಾರು ₹12.50 ಲಕ್ಷ ಪ್ರಾಯೋಜಕತ್ವದ ಕ್ರೀಡಾಕೂಟದ ಜರ್ಸಿ ಅನಾವರಣಗೊಳಿಸಿದ ಜಿಲ್ಲಾಧಿಕಾರಿ, ಆರಂಭಿಕ ವಾಲಿಬಾಲ್ ಪಂದ್ಯಕ್ಕೆ ಸರ್ವ್ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೆಕ್ಸ್ಟ್ ಫೌಂಡೇಷನ್ ಈ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು. ನಾಲ್ಕು ದಿನಗಳ ಕಾಲ ವಿವಿಧ 7 ಕ್ರೀಡೆಗಳಲ್ಲಿ ಸುಮಾರು 1,400 ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಮುಂದಿನ ವರ್ಷ ಇನ್ನಷ್ಟು ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಸ್ಪೋರ್ಟ್ಸ್ ಹಬ್ಬ ಉತ್ತಮ ವೇದಿಕೆಯಾಗಲಿದೆ. ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಏಳು ಕ್ರೀಡೆಗಳಲ್ಲಿ ಸ್ಪರ್ಧೆ
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಗಳು ನಡೆಯಲಿವೆ. ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಕ್ರಿಕೆಟ್, ಎಂ.ಎಸ್.ಐ. ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್, ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಫುಟ್‌ಬಾಲ್ ಪಂದ್ಯಗಳು ನಡೆಯಲಿವೆ.
ಸೆ.27ರಂದು ಸೈಕ್ಲೋಥಾನ್
ಕ್ರೀಡಾ ಹಬ್ಬದ ಅಂಗವಾಗಿ ಸೆ.27ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಸೈಕ್ಲೋಥಾನ್ ನಡೆಯಲಿದೆ. ಜಗತ್ ವೃತ್ತ, ಸರ್ಕಾರಿ ವಸ್ತುಸಂಗ್ರಹಾಲಯ, ಖರ್ಗೆ ಪೆಟ್ರೋಲ್ ಪಂಪ್ ಸರ್ಕಲ್, ಬುದ್ಧ ವಿಹಾರ, ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಮಿನಿ ವಿಧಾನಸೌಧ ಮಾರ್ಗವಾಗಿ ಸಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಗುಪ್ತಚರ ವಿಭಾಗದ ಎಸ್‌ಪಿ ಸ್ವಪ್ನಿಲ್ ಮಾನೆ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಸಿಪಿ ಶಾಲು, ಸಹಾಯಕ ಆಯುಕ್ತೆ ರಿತಿಕಾ ವರ್ಮಾ, ಸ್ಪ್ರೆಂಜೋ ಸಂಸ್ಥೆಯ ಪ್ರವೃತ್, ಕ್ರಿಕೆಟ್ ಅಸೋಸಿಯೇಷನ್‌ನ ಜೈಭೀಮ ಧರ್ಗಿ, ಚೆಸ್ ಅಸೋಸಿಯೇಷನ್‌ನ ಪ್ರಮೋದ ಮೌರ್ಯ, ಫುಟ್‌ಬಾಲ್ ಅಸೋಸಿಯೇಷನ್‌ನ ಮಂಜುನಾಥ, ವಾಲಿಬಾಲ್ ಅಸೋಸಿಯೇಷನ್‌ನ ಬಾಬರ್ ಖಾನ್, ಸೈಕ್ಲಿಂಗ್ ಅಸೋಸಿಯೇಷನ್‌ನ ಸುರೇಶ ದೇಸಾಯಿ, ಕ್ರೀಡಾ ಇಲಾಖೆಯ ಪ್ರವೀಣ ಪುಣೆ, ಸಂಜಯ್ ಬಾಣದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಹಬ್ಬದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ ಅವರು ಸ್ವಾಗತಿಸಿದರು.



