ಜಿಲ್ಲಾಸುದ್ದಿ

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

ಕಲಬುರಗಿ, ಸೆ.12: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಖಂಡಿಸಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧದ ಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮೌನ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಅನ್ನಪೂರ್ಣ ಕ್ರಾಸ್‌ವರೆಗೆ, ಅಲ್ಲಿಂದ ಮಹಾತ್ಮ ಗಾಂಧಿ ಪ್ರತಿಮೆಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೌನ ಪಾದಯಾತ್ರೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಹಾಂತೇಶ ಕೌಲಗಿ, ಮಲ್ಲಪ್ಪ ಎಂ. ಹೊಸಮನಿ, ದಿನೇಶ ದೊಡ್ಡಮನಿ, ಮೋದಿನ್ ಪಟೇಲ್ ಅಣಬಿ, ಶರಣು ಶಾಸ್ತ್ರಿ, ಹರೀಶ್ ಖಾನಾಪುರ, ಹುಲಿಗೆಪ್ಪ ಕನಕಗಿರಿ, ಸಾಜೀದ್ ಅಲಿ ರಂಜೋಳ್, ನಂದಕುಮಾರ ನಾಗಭುಜಂಗ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉತ್ತರಾಖಂಡ ಸರ್ಕಾರದ ವಿರುದ್ಧ ಹಾಗೂ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವೇದಿಕೆಯನ್ನು ‘ಶುದ್ಧೀಕರಣ’ ಮಾಡಿರುವ ಕ್ರಮವನ್ನು ಖಂಡಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button