ಜಿಲ್ಲಾಸುದ್ದಿ

ವಿದ್ಯಾರ್ಥಿಗಳ ಸಾಧನೆಗೆ ಏಕಾಗ್ರತೆ, ಸತತ ಪ್ರಯತ್ನ ಅಗತ್ಯ: ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ

ಕಲಬುರಗಿ, ಸೆ.12: ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಿರ್ಮಾಪಕರು. ತಮ್ಮಲ್ಲಿರುವ ಪ್ರತಿಭೆಯನ್ನು ಹೊರತಂದು, ಏಕಾಗ್ರತೆ ಹಾಗೂ ಸತತ ಪ್ರಯತ್ನದೊಂದಿಗೆ ಕಾರ್ಯಪ್ರವೃತ್ತರಾದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಖ್ಯಾತ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.

ನಗರದ ಎಕೆಡಿಆರ್ ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಚಾರಿತ್ರ್ಯ ಹಾಗೂ ಸಂಸ್ಕಾರವುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿರುವ ಎಕೆಡಿಆರ್ ದೇವಿ ಪಿಯು ಕಾಲೇಜಿನ ಸಾಧನೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮನಸ್ಸಿನಲ್ಲಿರುವ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಮುನ್ನಡೆಸುವ ಮಾರ್ಗವೇ ಶಿಕ್ಷಣ. ಇಂತಹ ಸಂಸ್ಕಾರಭರಿತ ಶಿಕ್ಷಣವನ್ನು ಇಲ್ಲಿ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಸಾಹಿತಿ ಮುಡುಬಿ ಗುಂಡೇರಾವ್ ಮಾತನಾಡಿ, ನಮ್ಮ ಪ್ರದೇಶದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವುದು ಅತ್ಯಗತ್ಯ. ನಮ್ಮ ನೆಲವೇ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ, ಅವರನ್ನು ಜವಾಬ್ದಾರಿಯುತ ಹಾಗೂ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ಎಲ್ಲ ಪೋಷಕರ ಮೇಲಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು, ಓದಿನತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಚನಪ್ರಿಯ ಜಗದೀಶ ಮರಪಳ್ಳಿ, ಕಾಲೇಜಿನ ವ್ಯವಸ್ಥಾಪಕ ಎಂ.ವಿ.ಎಸ್. ಸುಬ್ರಹ್ಮಣ್ಯಂ, ಕಿರಣ ಗೋಡಬಾಳೆ, ಶಿವರಾಜ ಪಾಟೀಲ, ಪರಮಾನಂದ ಸರಸಂಬಿ, ರಾಜೇಂದ್ರ ಮಾಡಬೂಳ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಬಸವರಾಜ ಮೊರಬದ, ಪ್ರೊ. ಎಸ್.ಎಲ್. ಪಾಟೀಲ, ಧರ್ಮರಾಜ ಜವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button