ಕನ್ನಡ ಶಾಸ್ತ್ರೀಯ ಜ್ಞಾನ ಪರಂಪರೆ: ಸೆ.15, 16ರಂದು ಎರಡು ದಿನಗಳ ಕಾರ್ಯಾಗಾರ

ಕಲಬುರಗಿ, ಸೆ.12: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಸಹಯೋಗದಲ್ಲಿ ‘ಕನ್ನಡ ಶಾಸ್ತ್ರೀಯ ಜ್ಞಾನ ಪರಂಪರೆ’ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೆ.15 ಮತ್ತು 16ರಂದು ಕನ್ನಡ ವಿಭಾಗದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕನ್ನಡದ ವಿವಿಧ ಶಾಸ್ತ್ರಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವ ಜ್ಞಾನ ಪರಂಪರೆಯ ಕುರಿತು ವಿದ್ವಾಂಸರಿಂದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯಾಗಾರದ ಸಂಯೋಜಕ ಡಾ. ರೋಹಿಣಾಕ್ಷ ತಿಳಿಸಿದ್ದಾರೆ.
ಸೆ.15ರಂದು ಬೆಳಿಗ್ಗೆ 10.30ಕ್ಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಕರ್ನಾಟಕದ ಹಿರಿಯ ಸಂಶೋಧಕ ಡಾ. ದೇವರಕೊಂಡಾರೆಡ್ಡಿ ಆಶಯ ಭಾಷಣ ಮಾಡಲಿದ್ದು, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ ಕೊಡಗುಂಟಿ, ಕಾರ್ಯಕ್ರಮ ಸಂಯೋಜಕ ಡಾ. ಎಲ್.ಆರ್. ಪ್ರೇಮಕ ಹಾಗೂ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಗಣೇಶ ಪವಾರ್ ಉಪಸ್ಥಿತರಿರುವರು.
ಕಾರ್ಯಾಗಾರದಲ್ಲಿ ಒಟ್ಟು ಒಂಬತ್ತು ಗೋಷ್ಠಿಗಳು ನಡೆಯಲಿದ್ದು, ಕನ್ನಡ ಶಾಸ್ತ್ರೀಯ ಜ್ಞಾನ ಸಂಪತ್ತು ಮತ್ತು ವಿಜ್ಞಾನ, ಕನ್ನಡ ಧ್ವನಿ ವಿಜ್ಞಾನದ 2000 ವರ್ಷಗಳ ಇತಿಹಾಸ, ಅಮರಕನ್ನಡ ಮತ್ತು ಮೋಡಿ ಲಿಪಿ, ಮದನತಿಲಕ ಮತ್ತು ಆಧುನಿಕತೆ, ಬಂಧುವವರ್ಮನ ಜೀವಸಂಬೋಧನೆ, ಜೈನ ಶಿಲ್ಪಶಾಸ್ತ್ರ, ಮಂಗರಸನ ಖಗೇಂದ್ರ ಮಣಿದರ್ಪಣದ ಮಹತ್ವ ಮತ್ತು ಪ್ರಸ್ತುತತೆ, ಲಲಿತ ವಿಸ್ತರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ.
ಸೆ.16ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ವಿದ್ವಾಂಸ ಡಾ. ಶೇಷಶಾಸ್ತ್ರಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮುಖ್ಯ ಅತಿಥಿಯಾಗಿ ಹಾಗೂ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ ಕೊಡಗುಂಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.



