ಶರಣರಿಂದ ಕ್ರಾಂತಿ, ಹಿಂದೂ ಧರ್ಮ ನಿಂತ ನೀರಲ್ಲ: ಮಾಜಿ ಸಚಿವ ಬೆಳ್ಳುಬ್ಬಿ

ಜೇವರ್ಗಿ, ಸೆ.೧೦- ತಾಲ್ಲೂಕಿನಲ್ಲಿ ಅನೇಕ ಶರಣರು, ಸೂಫಿ ಸಂತರು, ದಾರ್ಶನೀಕರು ಬಾಳಿ ಬೆಳಗಿದ ಪುಣ್ಯ ಭೂಮಿಯಾಗಿದ್ದು ಇಂತಹ ಭೂಮಿಯಲ್ಲಿ ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಮತ್ತು ಕೃಷಿ ಚಿಂತಕ ಎಸ್.ಕೆ. ಬೆಳ್ಳುಬ್ಬಿ ಅವರು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ೭ನೇ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಶರಣರ ಚಿಂತನೆ ಇಂದಿಗೂ ಕೂಡ ಅರ್ಥಪೂರ್ಣವಾಗಿದೆ. ಆಗಿನ ಶರಣರು ನುಡಿದಂತೆ ನಡೆದುಕೊಂಡು ಇವತ್ತಿಗೂ ಮಾದರಿಯಾಗಿದ್ದಾರೆ. ಬಸವಣ್ಣನವರು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸತತ ಪ್ರಯತ್ನ ಮಾಡಿದ್ದು ಕೊನೆಗೆ ಅಂತರ್ಜಾತಿ ವಿವಾಹ ಮಾಡಿಸಿ ಸಮ ಸಮಾಜ ನಿರ್ಮಿಸಿ, ಕ್ರಾಂತಿ ಮಾಡಿದ್ದಾರೆ ಎಂದರು.
ಹಿoದೂ ಧರ್ಮ ನಿಂತ ನೀರಲ್ಲ, ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ದೂರವಿಡುತ್ತದೆ ಎಂದು ಅವರು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ೧೨ನೇಶತಮಾನ ಸಮಾನತೆ ಸಾರಿದ ಶತಮಾನವಾಗಿತ್ತು. ನಡೆ ನುಡಿ ಒಂದಾಗಿಸಿಕೊoಡಿದ್ದು ಶರಣ ಸಂಸ್ಕೃತಿ ಅಂತಹ ಶರಣರಿಗೆ ನಾವೆಲ್ಲರೂ ಗೌರವ ಕೊಡಬೇಕು ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಗುರಲಿಂಗ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ಕಲ್ಲಪ್ಪ ಯಾದವ, ಕಾರ್ಯಾಧ್ಯಕ್ಷ ರಾಜುಗೌಡ ಹೆಗಣಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿಂಗಣ್ಣಗೌಡ ನಂದಿಹಳ್ಳಿ ಇಎಸ್ಐ ತುಕಾರಾಮ, ಪ್ರಮೋದಕುಮಾರ್ ಪತ್ತಾರ, ನಿಂಗಣ್ಣಗೌಡ ಹಿರೇಗೌಡ ಸೊನ್ನ ಹಾಗೂ ಇನ್ನಿತರ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗುರಲಿಂಗ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ಕಲ್ಲಪ್ಪ ಯಾದವ, ಕಾರ್ಯಾಧ್ಯಕ್ಷ ರಾಜುಗೌಡ ಹೆಗಣಿ ಅವರನ್ನು ಪಟ್ಟಣದ ಮಿನಿ ವಿಧಾನಸೌಧದಿಂದ ಸಾರೋಟಿನಲ್ಲಿ ಎಪಿಎಂಸಿ ವೇದಿಕೆ ವರೆಗೆ ಭವ್ಯ ಮೆರವಣಿಗೆ ಮಾಡಲಾಯಿತು. ಜೇರಟಗಿಯ ಮಹಾಂತ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಾಗರಿಕರು, ಮಹಿಳೆಯರು, ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.



