ಜಿಲ್ಲಾಸುದ್ದಿ

ಪೌರ ಕಾರ್ಮಿಕರಿಗೆ ಅವಮಾನ ಖಂಡನೀಯ: ಸಿದ್ದು ಕೆರೂರ್

ಜೇವರ್ಗಿ, ಸೆ.೧೦- ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಜೀವನಕ್ಕಾಗಿ ದುಡಿಯುತ್ತಿರುವ ಪೌರಕಾರ್ಮಿಕರನ್ನು ಅವಮಾನಿಸುವ ಹಾಗೂ ಅವರ ಘನತೆಗೆ ಧಕ್ಕೆ ಉಂಟುಮಾಡುವoತೆ ಮಾತನಾಡಿರುವ ಸಚಿವ ಕೃಷ್ಣ ಬೈರೇಗೌಡ ಕ್ಷಮೆ ಕೇಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಸಿದ್ದು ಕೆರೂರ್ ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಪೌರ ಕಾರ್ಮಿಕರೊಂದಿಗೆ ಕೃಷ್ಣ ಬೈರೇಗೌಡ ನಡೆದುಕೊಂಡ ರೀತಿಯು ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ, ಕಾರ್ಮಿಕರೊಂದಿಗೆ ಕನಿಷ್ಠ ಗೌರವ ಮತ್ತು ಮಾನವೀಯತೆಯಿಂದ ಮಾತನಾಡುವ ಬದಲು ಅಧಿಕಾರದ ದರ್ಪದಿಂದ ವರ್ತಿಸಿರುವುದು ಒಪ್ಪಲಾಗದು. ಸಚಿವರು ತಮ್ಮ ವರ್ತನೆ ಕುರಿತು ಸ್ಪಷ್ಟನೆ ನೀಡಿ, ಪೌರಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು. ಪೌರಕಾರ್ಮಿಕರು ನಗರದ ಕಸವನ್ನು ಮಾತ್ರ ತೆರವುಗೊಳಿಸುವವರಲ್ಲ.

ನಗರದ ನಾಗರಿಕ ಜೀವನವನ್ನು ಸಾಧ್ಯವಾಗಿಸುವ ಮುಂಚೂಣಿ ಶ್ರಮಿಕರು. ಅವರ ಪರಿಶ್ರಮವಿಲ್ಲದೆ, ನಗರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ನಿರ್ವಹಿಸುವುದು ಸಾಧ್ಯವಿಲ್ಲ. ಇಂತಹ ಶ್ರಮಿಕರನ್ನು ಸಾರ್ವಜನಿಕವಾಗಿ ಗದರಿಸುವುದು, ಬೆದರಿಸುವುದು ಅಥವಾ ಅವಮಾನಿಸುವುದೇ ಆಡಳಿತದ ದಕ್ಷತೆ ಎಂದು ಭಾವಿಸುವುದು ತಪ್ಪು ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಮೇಲೆ ಆರೋಪ ಹೊರಿಸುವ ಬದಲು ಕಾರ್ಮಿಕರ ಕೊರತೆ, ಖಾಲಿ ಹುದ್ದೆಗಳು, ಗುತ್ತಿಗೆ ಪದ್ಧತಿ, ಪೌರಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಕಾರ್ಮಿಕರು ತೊಡಗಿಸಿಕೊಂಡಿದ್ದು, ಅವರು ಇಂದಿಗೂ ಸಾಮಾಜಿಕ ಕೀಳರಿಮೆ, ತಾರತಮ್ಯ ಮತ್ತು ಅವಮಾನಕಾರಿ ವರ್ತನೆಗಳನ್ನು ಎದುರಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಅಧಿಕಾರದಲ್ಲಿರುವವರು ಇನ್ನಷ್ಟು ಜವಾಬ್ದಾರಿಯಿಂದ ಮತ್ತು ಮಾನವೀಯತೆಯಿಂದ ವರ್ತಿಸಬೇಕಾಗಿದೆ. ನಗರದ ಸಮಸ್ಯೆಗಳಿಗೆ ಪೌರಕಾರ್ಮಿಕರನ್ನೇ ಬಲಿಪಶುಗಳನ್ನಾಗಿ ಮಾಡುವ ಗುಬ್ಬಿಮೇಲೆ ಬ್ರಹ್ಮಾಸ್ತ್ರದ ಧೋರಣೆಯನ್ನು ಸರ್ಕಾರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೆಲಸದ ಒತ್ತಡ, ವೇತನ ಪಾವತಿಯಲ್ಲಿ ವಿಳಂಬ, ಸುರಕ್ಷತಾ ಸೌಲಭ್ಯಗಳ ಕೊರತೆ, ಆಡಳಿತಾತ್ಮಕ ವೈಫಲ್ಯಗಳ ಕುರಿತು ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾರ್ಮಿಕರಿಗೆ ವಾರದ ರಜೆ, ಸಮಯಕ್ಕೆ ಸರಿಯಾಗಿ ವೇತನ, ಸುರಕ್ಷತಾ ಉಪಕರಣಗಳು, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯ ಮೂಲಕ ನಡೆಯುತ್ತಿರುವ ಶೋಷಣೆಯನ್ನು ಕೊನೆಗೊಳಿಸಿ, ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸಿ, ನೇರ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button