ಮನರಂಜನೆಸಿನಿಮಾ

‘ಸಲ್ಮಾನ್‌ಗಿಂತ ಕೇವಲ 9 ವರ್ಷ ಹಿರಿಯಳು’: ‘ಭಾರತ್’ ಚಿತ್ರದಲ್ಲಿ ಅವರ ತಾಯಿಯಾಗಿ ನಟಿಸಲು ಕಾರಣ ಬಿಚ್ಚಿಟ್ಟ ಸೋನಾಲಿ ಕುಲಕರ್ಣಿ

‘ನನ್ನಿಂದ ಈ ಪಾತ್ರ ಮಾಡಲು ಸಾಧ್ಯವಿಲ್ಲ’ ಎಂದಿದ್ದ ನಟಿಗೆ ನಿರ್ದೇಶಕ, ಪಾತ್ರವರ್ಗ ಆಯ್ಕೆ ನಿರ್ದೇಶಕರ ಮನವೊಲಿಕೆ; ಉತ್ತಮ ಸಂಭಾವನೆಯೂ ಪ್ರಮುಖ ಕಾರಣ

ಮುಂಬೈ, ಆ.31: ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ ಅವರು 2019ರಲ್ಲಿ ಬಿಡುಗಡೆಯಾದ ‘ಭಾರತ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗಿಂತ ಕೇವಲ ಒಂಬತ್ತು ವರ್ಷ ಹಿರಿಯರಾಗಿದ್ದರೂ ತಾಯಿಯ ಪಾತ್ರವನ್ನು ಒಪ್ಪಿಕೊಳ್ಳಲು ಉತ್ತಮ ಸಂಭಾವನೆಯೂ ಪ್ರಮುಖ ಕಾರಣವಾಗಿತ್ತು ಎಂದು 51 ವರ್ಷದ ನಟಿ ತಿಳಿಸಿದ್ದಾರೆ.

ಇತ್ತೀಚೆಗೆ ಸ್ಕ್ರೀನ್‌ಗೆ ನೀಡಿದ ಸಂದರ್ಶನದಲ್ಲಿ ಸೋನಾಲಿ ಕುಲಕರ್ಣಿ ಅವರು ‘ಭಾರತ್’ ಚಿತ್ರದ ಜಾನಕಿ ದೇವಿ ಪಾತ್ರದ ಕುರಿತು ಮಾತನಾಡಿದ್ದಾರೆ. ಪಾತ್ರದ ಪ್ರಸ್ತಾಪ ಬಂದಾಗ ಆರಂಭದಲ್ಲಿ ತಾವು ಹಿಂಜರಿದಿದ್ದಾಗಿ ಅವರು ಹೇಳಿದ್ದಾರೆ.

“ಪಾತ್ರವರ್ಗ ಆಯ್ಕೆ ನಡೆಯುತ್ತಿದ್ದಾಗ, ನಾನು ಈ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ,” ಎಂದು ಸೋನಾಲಿ ನೆನಪಿಸಿಕೊಂಡಿದ್ದಾರೆ. ಆದರೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹಾಗೂ ಪಾತ್ರವರ್ಗ ಆಯ್ಕೆ ನಿರ್ದೇಶಕ ಮುಖೇಶ್ ಛಾಬ್ರಾ ಅವರು ಈ ಪಾತ್ರಕ್ಕೆ ತಾವೇ ಸೂಕ್ತ ಆಯ್ಕೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಸವಾಲಾಗಿ ಸ್ವೀಕರಿಸಿ ಪಾತ್ರ ಮಾಡಲು ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.

ಚಿತ್ರದ ಕಥೆಯಲ್ಲಿ ಹಿನ್ನೋಟದ ದೃಶ್ಯಗಳಿಗೆ ಅತ್ಯಂತ ಮಹತ್ವವಿತ್ತು. ಭಾರತ್ ಎಂಬ ಪಾತ್ರಕ್ಕೆ ಆ ಹೆಸರು ಹೇಗೆ ಬಂದಿತು ಮತ್ತು ನಂತರದ ಸನ್ನಿವೇಶಗಳಿಗೆ ಆತ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆ ಭಾಗ ಪ್ರಮುಖವಾಗಿತ್ತು ಎಂದು ಸೋನಾಲಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವ ಕುತೂಹಲವೂ ತಮಗಿತ್ತು ಎಂದು ಅವರು ತಿಳಿಸಿದ್ದಾರೆ. “ಯಾವುದೇ ನಿರ್ದೇಶಕ ಅಥವಾ ಪಾತ್ರವರ್ಗ ಆಯ್ಕೆ ನಿರ್ದೇಶಕರು ತಪ್ಪಾದ ವ್ಯಕ್ತಿಯನ್ನು ಪಾತ್ರಕ್ಕೆ ಆಯ್ಕೆ ಮಾಡಲು ಬಯಸುವುದಿಲ್ಲ. ಅದು ಅವರಿಗೂ ವಿಫಲತೆಯಾಗುತ್ತದೆ. ಹೀಗಾಗಿ ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ನಂತರ ಅದನ್ನು ಸವಾಲಾಗಿ ಸ್ವೀಕರಿಸಿದೆ,” ಎಂದು ಸೋನಾಲಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಜೊತೆಗಿನ ಅನುಭವ:
‘ಭಾರತ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆದಿತ್ತು ಎಂದು ಸೋನಾಲಿ ತಿಳಿಸಿದ್ದಾರೆ. ಸಲ್ಮಾನ್ ಅವರು ಸೆಟ್‌ನಲ್ಲಿದ್ದವರನ್ನು ಗೌರವದಿಂದ ಹಾಗೂ ಆತ್ಮೀಯವಾಗಿ ನಡೆಸಿಕೊಳ್ಳುವ ಗುಣದಿಂದ ಕಲಿಯಬಹುದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ ಅತ್ಯಂತ ಸೌಜನ್ಯದಿಂದ ವರ್ತಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಅವರು ತಮ್ಮ ಸೈಕಲ್ ಅನ್ನು ಸವಾರಿ ಮಾಡಲು ನೀಡಿದ್ದರು ಎಂದು ಸೋನಾಲಿ ನೆನಪಿಸಿಕೊಂಡಿದ್ದಾರೆ.

ಉತ್ತಮ ಸಂಭಾವನೆಯೂ ಕಾರಣ:
ಸಲ್ಮಾನ್ ಖಾನ್ ಪ್ರೊಡಕ್ಷನ್ಸ್‌ನಿಂದ ತಮಗೆ ಉತ್ತಮ ಸಂಭಾವನೆ ದೊರಕಿತ್ತು ಎಂದು ಸೋನಾಲಿ ಕುಲಕರ್ಣಿ ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ತಾಯಿಯ ಪಾತ್ರ ಒಪ್ಪಿಕೊಳ್ಳಲು ಸಂಭಾವನೆಯೂ ಒಂದು ಕಾರಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆದರೆ ಚಿತ್ರದ ಬಹುತೇಕ ದೃಶ್ಯಗಳಲ್ಲಿ ತಾವು ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿರಲಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಯುವ ಭಾರತ್ ಪಾತ್ರದಲ್ಲಿ ನಟಿಸಿದ್ದ ಬಾಲನಟನೊಂದಿಗೇ ತಮ್ಮ ಹೆಚ್ಚಿನ ದೃಶ್ಯಗಳಿದ್ದವು. ಹಿರಿಯ ಭಾರತ್ ಪಾತ್ರದಲ್ಲಿದ್ದ ಸಲ್ಮಾನ್ ಖಾನ್ ಅವರೊಂದಿಗೆ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದ ಕಥೆ:
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ‘ಭಾರತ್’ ಚಿತ್ರವು ಸಾಮಾನ್ಯ ವ್ಯಕ್ತಿಯೊಬ್ಬನ ಜೀವನದ ಮೂಲಕ ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸವನ್ನು ಚಿತ್ರಿಸಿತ್ತು. 1947ರ ಭಾರತ ವಿಭಜನೆಯಿಂದ 2010ರವರೆಗಿನ ಅವಧಿಯನ್ನು ಕಥೆ ಒಳಗೊಂಡಿತ್ತು.

ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಕತ್ರಿನಾ ಕೈಫ್, ಸುನಿಲ್ ಗ್ರೋವರ್, ಜಾಕಿ ಶ್ರಾಫ್ ಮತ್ತು ತಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button