NEET ಪ್ರತಿಭಟನಾಕಾರರ ವಿರುದ್ಧದ 13 ಎಫ್‌ಐಆರ್ ರದ್ದುಪಡಿಸುವ ಅರ್ಜಿ: ಸೆ.1ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
2,873 ಮಂದಿಯ ವಿರುದ್ಧ ಹೊಸ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರ ಮನವಿ; ಸಂವಿಧಾನದ 142ನೇ ವಿಧಿಯಡಿ ಅರ್ಜಿ

ನವದೆಹಲಿ, ಆ.31: NEET ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ 13 ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ಸೆಪ್ಟೆಂಬರ್ 1ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ. ಇದೇ ವೇಳೆ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ 2,873 ಮಂದಿಯ ಪಾತ್ರದ ಕುರಿತು ತನಿಖೆ ನಡೆಸಲು ಅವರ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆಯೂ ಪೊಲೀಸರು ಮನವಿ ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ತುರ್ತು ವಿಚಾರಣೆಗೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾಡಿದ ಮನವಿಯನ್ನು ಪರಿಗಣಿಸಿತು.
ದಿನದ ಕಲಾಪ ಮುಕ್ತಾಯಗೊಳ್ಳುವ ಹಂತದಲ್ಲಿ ತುಷಾರ್ ಮೆಹ್ತಾ ಅವರು ಮಧ್ಯಂತರ ಅರ್ಜಿ ಸಲ್ಲಿಸಲು ಬಯಸಿರುವುದಾಗಿ ತಿಳಿಸಿದರು. ಪ್ರತಿಭಟನೆಗೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಸಂವಿಧಾನದ 142ನೇ ವಿಧಿಯನ್ನು ಅನ್ವಯಿಸುತ್ತಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣದ ಎಲ್ಲ ಪಕ್ಷಗಳು ಪರಸ್ಪರ ಹೊಂದಾಣಿಕೆಗೆ ಬಂದಿದ್ದರೆ ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಾಲಯ ಹೇಳಿ, ಮಂಗಳವಾರ ವಿಚಾರಣೆಗೆ ಅರ್ಜಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು.
13 ಎಫ್‌ಐಆರ್ ಹಿಂಪಡೆಯಲು ದೆಹಲಿ ಪೊಲೀಸರ ನಿರ್ಧಾರ:
ಜುಲೈ 25ರಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿ, ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ 13 ಎಫ್‌ಐಆರ್‌ಗಳನ್ನು ಮುಂದುವರಿಸಿಕೊಂಡು ಹೋಗಲು ದೆಹಲಿ ಪೊಲೀಸರು ಇಚ್ಛಿಸುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಆದರೆ ಪ್ರತಿಭಟನಾ ಸ್ಥಳದಲ್ಲಿ 2,873 ಮಂದಿ ಇದ್ದರು ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದ್ದು, ಇವರಲ್ಲಿ ಕೆಲವರಿಗೆ ಗಂಭೀರ ಅಪರಾಧ ಹಿನ್ನೆಲೆ ಇದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಮಾಹಿತಿಯನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ದೈಹಿಕ ಹಾನಿ ಅಥವಾ ಆಸ್ತಿ ನಾಶಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ಇವರ ಪಾತ್ರವಿದೆಯೇ ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ 2,873 ಮಂದಿಯನ್ನು ಮಾತ್ರ ಒಳಗೊಂಡಂತೆ ಹೊಸ ಹಾಗೂ ನಿರ್ದಿಷ್ಟ ಎಫ್‌ಐಆರ್ ದಾಖಲಿಸಲು ಅನುಮತಿ ನೀಡಬೇಕು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಹೊಸ ಪ್ರಕರಣ ಮತ್ತು ತನಿಖೆಯಲ್ಲಿ ‘ಅಪರಾಧ ಹಿನ್ನೆಲೆ’ ಎಂಬ ಪದಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ವ್ಯಾಖ್ಯಾನವನ್ನು ಪಾಲಿಸಲಾಗುವುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇತರ ಘಟನೆಗಳಿಗೆ ಹೊಸ ಎಫ್‌ಐಆರ್ ಇಲ್ಲ:
ಪ್ರಸ್ತುತ ಅರ್ಜಿಯಲ್ಲಿ ಉಲ್ಲೇಖಿಸಿರುವ ಘಟನೆಗಳನ್ನು ಹೊರತುಪಡಿಸಿ ಯಾವುದೇ ಇತರ ಘಟನೆಗಳಿಗೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಕರಣದ ವಿಶೇಷ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನ ವಿಶೇಷ ಅಧಿಕಾರವನ್ನು ಬಳಸಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ವಿಶೇಷ ವಾಸ್ತವಾಂಶಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ನೀಡಬೇಕು ಮತ್ತು ಭವಿಷ್ಯದ ಪ್ರಕರಣಗಳಿಗೆ ಇದನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.
ಮತ್ತೆ ಪ್ರತಿಭಟನೆಗೆ ಕರೆ:
ಈ ಬೆಳವಣಿಗೆಯ ಬೆನ್ನಲ್ಲೇ ಸಿಜೆಪಿ ದೆಹಲಿಯಲ್ಲಿ ಮತ್ತೊಮ್ಮೆ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಜುಲೈ 25ರಂದು ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿರುವ ಸಂಘಟನೆ, ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸಿದ್ದ 36 ದಿನಗಳ ಪ್ರತಿಭಟನೆಯನ್ನು ಹಿಂಪಡೆಯಲು ನೀಡಿದ್ದ ಭರವಸೆಗಳನ್ನು ಸರ್ಕಾರ ಪಾಲಿಸಿಲ್ಲ ಎಂದು ಆರೋಪಿಸಿದೆ.
ಶಿಕ್ಷಕರ ದಿನಾಚರಣೆಯಂದು ನಡೆಯಲಿರುವ ಮೆರವಣಿಗೆಗೆ NEET ಪರೀಕ್ಷೆ ರದ್ದಾದ ಬಳಿಕ ನಡೆದ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳು ಹಾಗೂ ಜುಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳ ಕುಟುಂಬಗಳು ನೇತೃತ್ವ ವಹಿಸಲಿವೆ ಎಂದು ಸಂಘಟನೆ ತಿಳಿಸಿದೆ.
‘ಅಪರಾಧ ಹಿನ್ನೆಲೆ’ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ:
NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಷಯಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿತ್ತು. ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ದೌರ್ಜನ್ಯದ ಆರೋಪಗಳನ್ನೂ ಸಮಿತಿ ಪರಿಶೀಲಿಸಬೇಕಿತ್ತು.
ಆಗಸ್ಟ್ 3ರಂದು ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ ಬಳಸಿದ್ದ ‘ಅಪರಾಧ ಹಿನ್ನೆಲೆ’ ಎಂಬ ಪದದ ಅರ್ಥವನ್ನು ಸ್ಪಷ್ಟಪಡಿಸಿತ್ತು. ಗಂಭೀರ ಹಾಗೂ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನಷ್ಟೇ ಈ ವರ್ಗಕ್ಕೆ ಸೇರಿಸಬೇಕು ಎಂದು ತಿಳಿಸಿದ್ದ ನ್ಯಾಯಾಲಯ, ಉಳಿದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಕಾನೂನು ಪ್ರಕಾರ ಮುಕ್ತಾಯಗೊಳಿಸಲು ಅಥವಾ ಹಿಂಪಡೆಯಲು ರಾಜ್ಯಗಳಿಗೆ ಅವಕಾಶ ನೀಡಿತ್ತು.
ಈ ಹಿಂದೆ ಕೇಂದ್ರ ಸರ್ಕಾರವೂ NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಮುಂದುವರಿಸದಿರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಅಪರಾಧ ಹಿನ್ನೆಲೆ ಇರಬಾರದು ಎಂಬ ಷರತ್ತು ವಿಧಿಸಲಾಗಿತ್ತು.
ಜುಲೈ 20ರಂದು ದೆಹಲಿಯಲ್ಲಿ ನಡೆದ ಸಂಸತ್ ಮೆರವಣಿಗೆ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಸಂಸತ್ ಭವನದತ್ತ ತೆರಳಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿದ್ದರು. ದೇಶದ ವಿವಿಧ ನಗರಗಳಿಗೆ ವ್ಯಾಪಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೂ ಸೇರಿತ್ತು.


