ಮನರಂಜನೆ

ಪ್ರತಿಭಟಿಸುವ ಹಕ್ಕು ಪ್ರಜಾಪ್ರಭುತ್ವದ ಕೊಡುಗೆ: ನಟ ಅಣ್ಣೂ ಕಪೂರ್

ಶಾಂತಿಯುತ ಪ್ರತಿಭಟನೆಗೆ ಬೆಂಬಲ; ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿ ಹಾನಿ ಒಪ್ಪಲಾಗದು ಎಂದ ಹಿರಿಯ ನಟ

ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದು ನಾಗರಿಕರ ಸಂವಿಧಾನಬದ್ಧ ಹಕ್ಕು. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಹಾಗೂ ಗಲಭೆ ಸೃಷ್ಟಿಸುವುದನ್ನು ಒಪ್ಪಲಾಗದು ಎಂದು ಹಿರಿಯ ನಟ ಅಣ್ಣೂ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವವು ನಾಗರಿಕರಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಅವಕಾಶ ನೀಡುತ್ತದೆ ಎಂದು ಹೇಳಿದರು. ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸುವುದಕ್ಕೂ ಹಿಂಸಾತ್ಮಕವಾಗಿ ವರ್ತಿಸುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಪ್ರತಿಭಟನಾಕಾರರು ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

“ಪ್ರಜಾಪ್ರಭುತ್ವ ಇರುವುದರಿಂದಲೇ ನೀವು ಪ್ರತಿಭಟನೆ ನಡೆಸಲು ಸಾಧ್ಯವಾಗಿದೆ. ಪ್ರಜಾಪ್ರಭುತ್ವ ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಪ್ರತಿಭಟನೆ ನಡೆಸುವ ಹಕ್ಕನ್ನು ಭಾರತದ ಪವಿತ್ರ ಸಂವಿಧಾನ ನಮಗೆ ನೀಡಿದೆ ಎಂಬುದು ಭಾರತೀಯರಾದ ನಮ್ಮ ಅದೃಷ್ಟ” ಎಂದು ಕಪೂರ್ ಹೇಳಿದ್ದಾರೆ.

ಪ್ರತಿಭಟನೆಗಳು ಹಿಂಸಾಚಾರ, ದಂಗೆ ಅಥವಾ ದಮನಕಾರಿ ಚಟುವಟಿಕೆಗಳ ರೂಪ ಪಡೆದಾಗ ಸರ್ಕಾರ ಕ್ರಮ ಕೈಗೊಳ್ಳುವುದನ್ನು ಸಮರ್ಥಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಬಂಧನದ ಘಟನೆಯನ್ನು ಉಲ್ಲೇಖಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕಪೂರ್, ತಮಗೆ ಯಾವುದೇ ರಾಜಕೀಯ ಹುದ್ದೆಯ ಆಕಾಂಕ್ಷೆಯಿಲ್ಲ ಎಂದು ಸ್ಪಷ್ಟಪಡಿಸಿದರು. “ನನಗೆ ಪ್ರಧಾನಿ ಮೋದಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ನನಗೆ ರಾಜ್ಯಸಭೆಯಲ್ಲಾಗಲಿ, ಸ್ವರ್ಗದಲ್ಲಾಗಲಿ ಯಾವುದೇ ಸ್ಥಾನ ಬೇಕಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶದ ಹಿತಾಸಕ್ತಿ ಮತ್ತು ಭದ್ರತೆಯನ್ನು ಕಾಪಾಡುವವರಿಗೆ ತಾವು ಬೆಂಬಲ ನೀಡುವುದಾಗಿ ತಿಳಿಸಿದ ಅವರು, ತಾವು ಒಬ್ಬ ಸಾಮಾನ್ಯ ಕಲಾವಿದನಾಗಿಯೇ ಉಳಿಯಲು ಬಯಸುವುದಾಗಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button