ಅಪರಾಧ

ಕಲಬುರಗಿಯಲ್ಲಿ ನಾಲ್ಕು ಮನೆಗಳ್ಳತನ: ತೆಲಂಗಾಣದ ಕುಖ್ಯಾತ ಕಳ್ಳನ ಬಂಧನ, 13.40 ಲಕ್ಷ ರೂ. ಮೌಲ್ಯದ ಆಸ್ತಿ ವಶ

ಅಂತರರಾಜ್ಯ ಕಳ್ಳನ ಬಂಧನ; ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣ, ನಗದು ವಶಪಡಿಸಿಕೊಂಡ ಪೊಲೀಸರು

ಕಲಬುರಗಿ, ಆ.25: ನಗರದ ವಿವಿಧೆಡೆ ನಡೆದ ನಾಲ್ಕು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ಕಲಬುರಗಿ ನಗರ ಪೊಲೀಸರು, ಆತನಿಂದ ಒಟ್ಟು 13.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಕಳವು ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಗಳಿಗೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯದ ಹೈದರಾಬಾದ್‌ನ ಪಬ್ಲಿಕ್ ಗಾರ್ಡನ್ ಸಮೀಪದ ಹಜ್ ಹೌಸ್ ಬಳಿಯ ನಿವಾಸಿ ಮೊಹಮ್ಮದ್ ಮುಜಾಹಿದ್ ಅಲಿಯಾಸ್ ಜಾವೀದ್, ತಂದೆ ಮೊಹಮ್ಮದ್ ಜಾಫರ್ (32) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 13,40,000 ರೂ. ಮೌಲ್ಯದ ಕಳವು ಆಸ್ತಿಯನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ ಪ್ರಕಾಶ ಶಾಲೆಯ ಹಿಂಭಾಗದ ಶಿವರಾಜ ತಾಂಬೆ ವೀರಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಶಿವರಾಜ ತಾಂಬೆ ಅವರು ತಮ್ಮ ಮಾವ ನಿಧನರಾದ ಹಿನ್ನೆಲೆಯಲ್ಲಿ ಪತ್ನಿ ವನೀತಾ ಅವರೊಂದಿಗೆ ಬಾಗಲಕೋಟೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನದ ಮೂರು ಉಂಗುರಗಳು ಹಾಗೂ 16 ಸಾವಿರ ರೂ. ನಗದು ಸೇರಿದಂತೆ ಒಟ್ಟು 66 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಗರ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ, ಪ್ರವೀಣ್ ಎಚ್. ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಹಾಗೂ ಪಿಐ ಜಿ.ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಎಎಸ್‌ಐ ಶಿವಶರಣಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ರಾಜ್ಯಗಳಲ್ಲಿ ಪ್ರಕರಣ

ಬಂಧಿತ ಆರೋಪಿಯ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣವಿದ್ದು, ಮಹಾರಾಷ್ಟ್ರದ ಲಾತೂರ್‌ನಲ್ಲಿ ಕೊಲೆ ಹಾಗೂ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

2019ರಿಂದ ಜೈಲಿನಲ್ಲಿದ್ದ ಆರೋಪಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸೈಫಾಬಾದ್‌ನಲ್ಲಿ ಕಳ್ಳತನ ಮಾಡಿದ್ದ. ನಂತರ ಕಲಬುರಗಿಗೆ ಬಂದು ನಗರದ ದರ್ಗಾ ಪ್ರದೇಶದಲ್ಲಿ ನಾಲ್ಕು ಮನೆಗಳ್ಳತನ ನಡೆಸಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ವ್ಯವಹಾರ ನಡೆಸಲು ನಿರ್ಧರಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಮೂರು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರಕರಣಗಳನ್ನು ಭೇದಿಸಲಾಗಿದೆ. 2025ರಲ್ಲಿ ನಡೆದ ಪ್ರಕರಣವೊಂದರಲ್ಲಿ ಚಿನ್ನದ ಸರ, ಎರಡು ಉಂಗುರಗಳು ಹಾಗೂ ಬೆಳ್ಳಿಯ ಉಂಗುರ, ಮತ್ತೊಂದು ಪ್ರಕರಣದಲ್ಲಿ ಐದು ಚಿನ್ನದ ಉಂಗುರಗಳು ಹಾಗೂ 2026ರಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಮೂರು ಉಂಗುರಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಮನೆಗಳ್ಳತನ ನಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆ ಪ್ರಕರಣದಲ್ಲಿ ಆರು ಚಿನ್ನದ ಉಂಗುರಗಳು ಹಾಗೂ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು 65 ಸಾವಿರ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ಒಟ್ಟಾರೆ 13.40 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ ಹಾಗೂ ಪ್ರವೀಣ್ ಎಚ್. ನಾಯಕ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button