ಜಿಲ್ಲಾಸುದ್ದಿ

ಶಹಾಬಾದ್‌ನಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಮಂಜೂರಿಗೆ ಆರ್‌ಪಿಐ ಆಗ್ರಹ

ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ: ಅಭಿಷೇಕ್ ಚಕ್ರವರ್ತಿ ಎಚ್ಚರಿಕೆ

ಕಲಬುರಗಿ, ಆ.25: ಜಿಲ್ಲೆಯ ತಾಲೂಕು ಕೇಂದ್ರ ಶಹಾಬಾದ್‌ನಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಮಂಜೂರು ಮಾಡಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ-ಅಂಬೇಡ್ಕರ್) ಜಿಲ್ಲಾಧ್ಯಕ್ಷ ಅಭಿಷೇಕ್ ಚಕ್ರವರ್ತಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ್ ಪಟ್ಟಣವಾಗಿ ಹಾಗೂ ತಾಲೂಕು ಕೇಂದ್ರವಾಗಿ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಇಲ್ಲ. ಇದರಿಂದ ದಲಿತ ಸಮುದಾಯದವರು ಅಂತ್ಯಕ್ರಿಯೆ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಸ್ಯೆಯ ಕುರಿತು ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಅವರು, ಇತ್ತೀಚೆಗೆ ಜಿಲ್ಲಾ ಹಾಗೂ ಸ್ಥಳೀಯ ಪಕ್ಷದ ಪದಾಧಿಕಾರಿಗಳು ಶಹಾಬಾದ್ ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ, ದಲಿತರಿಗೆ ಪ್ರತ್ಯೇಕವಾಗಿ ರುದ್ರಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಶಹಾಬಾದ್‌ನಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿಗಾಗಿ ತಕ್ಷಣ ಜಾಗ ಗುರುತಿಸಿ ಮಂಜೂರು ಮಾಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಪಕ್ಷದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಭಿಷೇಕ್ ಚಕ್ರವರ್ತಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದತ್ತು ಹೀರಾಪುರ, ಶರಣಪ್ಪ ಎಂ. ವಾಡೇಕರ, ಶರಣು ಮೆಂಗನ್, ರಾಕೇಶ್ ಡಿ. ವಾಡೇಕರ, ಶಿವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button