ಶೀಲ ಶಂಕಿಸಿ ಪತ್ನಿ, ಪುತ್ರಿಯ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಶೀಲ ಶಂಕಿಸಿ ಪತ್ನಿ-ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ; ಸಾಕ್ಷ್ಯಾಧಾರ ಆಧರಿಸಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ

ಕಲಬುರಗಿ, ಆ.25: ಜಿಲ್ಲೆಯ ಸೇಡಂ ಪಟ್ಟಣದ ವಿಶ್ವನಗರ್‌ನಲ್ಲಿ 2021ರ ಸೆಪ್ಟೆಂಬರ್ 23ರಂದು ಶೀಲ ಶಂಕಿಸಿ ಪತ್ನಿ ಜಗದೀಶ್ವರಿ ಹಾಗೂ ಪುತ್ರಿ ಪ್ರಿಯಾಂಕಾಳನ್ನು ಮನೆಯಲ್ಲಿ ಮಲಗಿದ್ದ ವೇಳೆ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಸೇಡಂ ನ್ಯಾಯಾಲಯದ ಪ್ರಕರಣವನ್ನು ವಿಚಾರಣೆ ನಡೆಸಿದ ಕಲಬುರಗಿಯ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠಾಸೀನ ನ್ಯಾಯಾಧೀಶ ಸಿರಾಜುದ್ದೀನ್ ಅವರು ತೀರ್ಪು ಪ್ರಕಟಿಸಿದ್ದಾರೆ.
ಅಭಿಯೋಜನೆಯ ವಾದವನ್ನು ಆಲಿಸಿ, ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿ ದಿಗಂಬರ ಗಂಜಾಳಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 498(ಎ) ಹಾಗೂ 302ರ ಅಡಿಯಲ್ಲಿ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿದೆ. ಪತ್ನಿ ಹಾಗೂ ಪುತ್ರಿಯನ್ನು ಜೋಡಿ ಕೊಲೆ ಮಾಡಿದ ಅಪರಾಧಕ್ಕಾಗಿ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಜಗದೀಶ್ವರಿ ಅಲಿಯಾಸ್ ಭವಾನಿಯನ್ನು ಸುಮಾರು 19 ವರ್ಷಗಳ ಹಿಂದೆ ದಿಗಂಬರನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 11 ವರ್ಷದ ಪುತ್ರಿ ಇದ್ದಳು. ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಆರೋಪಿ, ಪತ್ನಿ ಹಾಗೂ ಪುತ್ರಿಯನ್ನು ಬಿಡುವುದಿಲ್ಲ, ಹೊಡೆದು ಕೊಲೆ ಮಾಡುವುದಾಗಿ ಕಲಬುರಗಿಯಲ್ಲಿದ್ದ ಮನೆಯಲ್ಲೂ ಬೆದರಿಕೆ ಹಾಕುತ್ತಿದ್ದನು. ಜಗದೀಶ್ವರಿ ಅಕ್ಕ ಹಾಗೂ ಇತರರು ಆರೋಪಿಗೆ ಬುದ್ಧಿವಾದ ಹೇಳಿದ್ದರೂ ಆತ ಜಗಳ ಮಾಡುವುದನ್ನು ನಿಲ್ಲಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜಗದೀಶ್ವರಿ ಹಾಗೂ ಆಕೆಯ ಪುತ್ರಿಯನ್ನು ಪತಿಯೊಂದಿಗೆ ಸೇಡಂಗೆ ಕರೆದುಕೊಂಡು ಬಂದು ಬಾಡಿಗೆ ಮನೆಯಲ್ಲಿ ಇರಿಸಲಾಗಿತ್ತು. ಕೆಲ ದಿನಗಳವರೆಗೆ ದಂಪತಿ ಚೆನ್ನಾಗಿದ್ದರೂ ಬಳಿಕ ಮತ್ತೆ ಜಗಳ ಆರಂಭವಾಗಿತ್ತು. 2021ರ ಸೆಪ್ಟೆಂಬರ್ 23ರಂದು ಜಗಳ ತಾರಕಕ್ಕೇರಿ ಆರೋಪಿ ಕಟ್ಟಿಗೆಯಿಂದ ಪತ್ನಿ ಹಾಗೂ ಪುತ್ರಿಯನ್ನು ಹೊಡೆದು ಕೊಲೆ ಮಾಡಿದ್ದನು.
ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ರಾಜಶೇಖರ ಹಳಗೋದಿ ಅವರು ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ್ ಅವರು ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.



