ಹಾಸ್ಟೆಲ್ ಕಾಲೋನಿ ನಿರ್ಮಾಣಕ್ಕೆ ಆಗ್ರಹಿಸಿ ಪಾಲಿಕೆ ಮುಂದೆ ಕಾರ್ಮಿಕರ ಧರಣಿ
381 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯ

ಕಲಬುರಗಿ, ಆ.25: ನಿವೇಶನಗಳ ಹಕ್ಕುಪತ್ರ ವಿತರಣೆ, ಲೇಔಟ್ ಅಭಿವೃದ್ಧಿ ಹಾಗೂ ಹಾಸ್ಟೆಲ್ ಕಾಲೋನಿ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಮಂಗಳವಾರ ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಮಲಾಬಾಯಿ ಹಿರೇಮಠ, ಮೊಹಮ್ಮದ್ ಜಮೀನುದ್ದೀನ್ ಬಾಬಾ, ಮಲ್ಲಮ್ಮ ಕೊಡಲಿ, ಪರಶುರಾಮ ಹಡಲಗಿ, ಮೇಘರಾಜ್ ಕಠಾರೆ, ಅಲ್ಲಾ ಪಟೇಲ್ ವಾಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ನಂತರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಯಲ್ಲಿ, ತಾಜ್‌ಸುಲ್ತಾನಪುರದ ಸರ್ವೆ ನಂಬರ್ 264/ಪಿ ವ್ಯಾಪ್ತಿಯ 9 ಎಕರೆ 24 ಗುಂಟೆ ಜಮೀನಿನಲ್ಲಿ 381 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲ ಕಾನೂನು ಹೋರಾಟ ನಡೆದಿದ್ದು, 2021ರ ಫೆಬ್ರವರಿ 18ರಂದು ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದೆ ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ 381 ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲು ಯಾವುದೇ ಕಾನೂನು ತೊಡಕು ಇಲ್ಲ. ಹೀಗಾಗಿ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
381 ಫಲಾನುಭವಿಗಳು ದೀರ್ಘಕಾಲದಿಂದ ನಿವೇಶನಕ್ಕಾಗಿ ಕಾಯುತ್ತಿದ್ದು, ಮನೆ ನಿರ್ಮಾಣಕ್ಕಾಗಿ ಮೂಲ ಶುಲ್ಕವಾಗಿ ತಲಾ ₹10 ಸಾವಿರ ಪಾವತಿಸಿದ್ದಾರೆ. ಆದ್ದರಿಂದ ವಿಳಂಬ ಮಾಡದೆ ಹಕ್ಕುಪತ್ರಗಳನ್ನು ವಿತರಿಸಿ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಸತಿ ಒದಗಿಸಲು ಒತ್ತಾಯ
ಇದೇ ವೇಳೆ ನಗರದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸುಮಾರು 250 ಬಡ ಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹಲವರಿಗೆ ವಾಸಿಸಲು ಸ್ವಂತ ಮನೆ ಇಲ್ಲದ ಕಾರಣ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಪ್ರತಿ ತಿಂಗಳು ವೇತನ ಸರಿಯಾಗಿ ಪಾವತಿಯಾಗದಿರುವುದರಿಂದ ಮನೆ ಬಾಡಿಗೆ ನೀಡಲು ಸಾಧ್ಯವಾಗದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹೀಗಾಗಿ ಸರ್ಕಾರ ನಗರದ ಸೂಕ್ತ ಪ್ರದೇಶದಲ್ಲಿ ಹಾಸ್ಟೆಲ್ ಕಾಲೋನಿ ನಿರ್ಮಿಸಿ, ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
381 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ನಿವೇಶನ ಅಭಿವೃದ್ಧಿ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಮಹಾನಗರ ಪಾಲಿಕೆ ಮತ್ತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.



