ಎಸ್‌ಐಆರ್ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ
ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ 2.21 ಲಕ್ಷ ಮತದಾರರು

ಕಲಬುರಗಿ, ಅ.25: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1,14,753 ಪುರುಷರು, 1,06,739 ಮಹಿಳೆಯರು ಹಾಗೂ 21 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,21,513 ಮತದಾರರು ನೋಂದಣಿಯಾಗಿದ್ದಾರೆ ಎಂದು ಕಲಬುರಗಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರು ಹಾಗೂ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಸಾಹಿತ್ಯಾ ಆಲದಕಟ್ಟಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಒಟ್ಟು 2,74,878 ಮತದಾರರಿದ್ದರು. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಕಟಿಸಿರುವ ಕರಡು ಪಟ್ಟಿಯಲ್ಲಿ 2,21,513 ಮತದಾರರು ಮಾತ್ರ ಉಳಿದಿದ್ದಾರೆ. ಇವರಲ್ಲಿ 1,595 ಯುವ ಮತದಾರರು, 2,069 ಹಿರಿಯ ನಾಗರಿಕರು ಹಾಗೂ 2,930 ವಿಶೇಷಚೇತನ ಮತದಾರರು ಇದ್ದಾರೆ. ಪ್ರತಿ 1,000 ಪುರುಷ ಮತದಾರರಿಗೆ 930 ಮಹಿಳಾ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎಸ್‌ಐಆರ್ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 53,365 ಮತದಾರರನ್ನು ಎಎಸ್‌ಡಿಓ ಎಂದು ಗುರುತಿಸಲಾಗಿದೆ ಎಂದು ಸಾಹಿತ್ಯಾ ಆಲದಕಟ್ಟಿ ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ಕ್ಷೇತ್ರ ವ್ಯಾಪ್ತಿಯ ಎಲ್ಲ ತಹಶೀಲ್ದಾರ್ ಕಚೇರಿಗಳು, ಸ್ಥಳೀಯ ಸಂಸ್ಥೆಗಳ ಕಚೇರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿಯೂ ಕರಡು ಮತದಾರರ ಪಟ್ಟಿ ಲಭ್ಯವಿದೆ.
10,894 ಮತದಾರರಿಗೆ ನೋಟಿಸ್
ನೋ-ಮ್ಯಾಪಿಂಗ್ ಹಾಗೂ ಅಸಂಗತತೆ ಹೊಂದಿರುವ ಒಟ್ಟು 10,894 ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಸಾಹಿತ್ಯಾ ಆಲದಕಟ್ಟಿ ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸಲು ಹೆಚ್ಚುವರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ನಿಯೋಜಿಸುವಂತೆ ಶಿಫಾರಸು ಮಾಡಲಾಗಿದೆ. ನೋಟಿಸ್ ಹಾಗೂ ಹಕ್ಕು-ಆಕ್ಷೇಪಣೆಗಳ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ್ ಕೆ. ಆನಂದಶೀಲ, ಕಮಲಾಪುರ ತಹಶೀಲ್ದಾರ್ ಮೊಹಮ್ಮದ್ ಮೋಸಿನ್ ಹಾಗೂ ಶಹಾಬಾದ್ ತಹಶೀಲ್ದಾರ್ ನೀಲಪ್ರಭಾ ಉಪಸ್ಥಿತರಿದ್ದರು.



