ಸಾಹಿತ್ಯ

‘ಕನ್ನಡತಾಯಿಯ ಉಡಿ ತುಂಬಿದ ಜಯದೇವಿತಾಯಿ ಲಿಗಾಡೆ’

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಕಲಿತು ‘ಸಿದ್ಧರಾಮೇಶ್ವರ ಪುರಾಣ’ ರಚಿಸಿದ ಮಹಾನ್ ಜಾನಪದ ವಿದ್ವಾಂಸೆ: ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ: ಕರ್ನಾಟಕ ಏಕೀಕರಣಕ್ಕಾಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಜಯದೇವಿತಾಯಿ ಲಿಗಾಡೆ ಅವರು ಶ್ರೇಷ್ಠ ಜಾನಪದ ವಿದ್ವಾಂಸರಾಗಿದ್ದರು ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕ ಹಾಗೂ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹಿರಿಯ ಮಹಿಳಾ ಜಾನಪದ ವಿದ್ವಾಂಸರ ಬದುಕು-ಬರಹ’ ಉಪನ್ಯಾಸ ಮಾಲಿಕೆ-2 ಕಾರ್ಯಕ್ರಮದಲ್ಲಿ ಜಯದೇವಿತಾಯಿ ಲಿಗಾಡೆ ಅವರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆ ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದ ಸೊಲ್ಲಾಪುರದ ವಾರದ ಮಲ್ಲಪ್ಪನವರ ಇಂಧ್ರ ಭವನದಲ್ಲಿ ಬೆಳೆದು, ಬಸವಕಲ್ಯಾಣದ ಭಕ್ತಿ ಭವನಕ್ಕೆ ಬಂದ ಜಯದೇವಿತಾಯಿ ಲಿಗಾಡೆ ಅವರ ಸುದೀರ್ಘ ಪಯಣ ಅತ್ಯಂತ ರೋಚಕವಾದದ್ದು ಎಂದು ಸತ್ಯಂಪೇಟೆ ಹೇಳಿದರು.

ಮರಾಠಿ ಅವರ ಮಾತೃಭಾಷೆಯಾಗಿದ್ದರೂ ಕನ್ನಡವನ್ನು ಕಲಿತು, ಕನ್ನಡದಲ್ಲಿಯೇ ‘ಸಿದ್ಧರಾಮೇಶ್ವರ ಪುರಾಣ’ ರಚಿಸುವ ಮೂಲಕ ಕನ್ನಡತಾಯಿಯ ಉಡಿ ತುಂಬಿದ ಶ್ರೇಷ್ಠ ಜಾನಪದ ವಿದ್ವಾಂಸರಾಗಿ ಜಯದೇವಿತಾಯಿ ಲಿಗಾಡೆ ಅವರು ಗುರುತಿಸಿಕೊಂಡಿದ್ದರು ಎಂದರು.

ಅವರ ಜಾನಪದ ಶೈಲಿಯ ತ್ರಿಪದಿಗಳಲ್ಲಿ ಬಸವಣ್ಣ, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಹಲವು ಮಹನೀಯರ ಜೀವನದ ವಿಚಾರಗಳೊಂದಿಗೆ ಬದುಕಿಗೆ ಅಗತ್ಯವಾದ ಅನೇಕ ಉಪಯುಕ್ತ ಸಂದೇಶಗಳೂ ಅಡಕವಾಗಿವೆ ಎಂದು ತಿಳಿಸಿದರು.

‘ಸಿದ್ಧರಾಮ ಕರ್ನಾಟಕ ಸೇರುವುದು ಯಾವಾಗ?’

ಅನುಭವ ಮಂಟಪದಲ್ಲಿ ಸಿದ್ಧರಾಮೇಶ್ವರರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ಹೊಸ್ತಿಲ ಹೊರಗೆ ನಿಲ್ಲಿಸಿ ಪರೀಕ್ಷೆ ಮಾಡಲಾಗಿತ್ತು. ಈಗಲೂ ನಮಗೆ ಅಂತಹ ಪರೀಕ್ಷೆ ಎದುರಾಗುತ್ತಿದೆ. ಬೀದರ್‌ನ ಬಸವಣ್ಣ ಈಗಾಗಲೇ ಕರ್ನಾಟಕದ ಭಾಗವಾಗಿರುವಾಗ, ಸೊಲ್ಲಾಪುರದ ಸಿದ್ಧರಾಮನು ತನ್ನ ಜನತೆಯೊಂದಿಗೆ ಕರ್ನಾಟಕವನ್ನು ಸೇರುವುದು ಯಾವಾಗ? ಎಂದು ಜಯದೇವಿತಾಯಿ ಲಿಗಾಡೆ ಅವರು ಪ್ರಶ್ನಿಸುತ್ತಿದ್ದರು ಎಂದು ಸತ್ಯಂಪೇಟೆ ಅವರು ಅವರ ಬದುಕಿನ ಹಲವು ಘಟನೆಗಳನ್ನು ಸ್ಮರಿಸಿಕೊಂಡರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಕೊಂಡಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಪರೂತೆ ಹಾಗೂ ರೇವಣಸಿದ್ದಪ್ಪ ದುಖಾನ್ ವೇದಿಕೆಯಲ್ಲಿದ್ದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಎ.ಎಂ. ನಿರೂಪಿಸಿದರು. ಸೃಷ್ಠಿ ಬಿರಾದಾರ ಪ್ರಾರ್ಥನಾಗೀತೆ ಹಾಡಿದರು. ದಾನಮ್ಮ ಕೋರವಾರ ಸ್ವಾಗತಿಸಿದರು. ಬಸಮ್ಮ ಗೊಬ್ಬುರ ವಂದಿಸಿದರು.

ರೇಣುಕಾ ಹಾಗರಗುಂಡಗಿ, ಡಾ. ಮಹೇಶ ಗಂವ್ಹಾರ, ಶಿವರಾಜ ಪಾಟೀಲ, ಚನ್ನಬಸಪ್ಪ ಅಣಬಿ, ಡಾ. ಪ್ರೇಮಚಂದ್ ಚವ್ಹಾಣ, ಮನೋಹರ ಪೋತ್ದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button