ಜಿಲ್ಲಾಸುದ್ದಿ

ಹಿಂದುಳಿದ ವರ್ಗಗಳ ರಾಜಕೀಯ ಧ್ವನಿಗೆ ವಿಕಾಸಶೀಲ ಇನ್ಸಾನ್ ಪಾರ್ಟಿ ಬಲ: ಶಾಂತಪ್ಪ ಕೂಡಿ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ

ಕಲಬುರಗಿ: ರಾಷ್ಟ್ರಮಟ್ಟದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮಾಜಗಳಿಗೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಮುಖೇಶ್ ಸಹಾನಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ವಿಕಾಸಶೀಲ ಇನ್ಸಾನ್ ಪಾರ್ಟಿ (VIP) ಕರ್ನಾಟಕದಲ್ಲಿಯೂ ಪಕ್ಷ ಸಂಘಟನೆಗೆ ಮುಂದಾಗಿದೆ.

2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಶಾಂತಪ್ಪ ಕೂಡಿ ಅವರಿಗೆ ವಹಿಸಿ, ಅವರನ್ನು ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶಾಂತಪ್ಪ ಕೂಡಿ ಅವರ ನೇಮಕವನ್ನು ಸ್ವಾಗತಿಸಿರುವ ಅಂಬಿಗರ ಚೌಡಯ್ಯ ಯುವಕ ಸಂಘದ ಸದಸ್ಯರು, ಸಮಾಜದ ಯುವಕರು ಹಾಗೂ ಮುಖಂಡರು ಅಭಿನಂದನೆ ಸಲ್ಲಿಸಿದರು. ಕೋಲಿ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ನ್ಯಾಯ ದೊರಕಬೇಕು. ಈ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಲು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ವಿಕಾಸಶೀಲ ಇನ್ಸಾನ್ ಪಾರ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದ್ದು, ಹಿಂದುಳಿದ ಸಮಾಜಗಳ ರಾಜಕೀಯ ಹಕ್ಕುಗಳನ್ನು ಕಡೆಗಣಿಸಿರುವ ಪಕ್ಷಗಳಿಗೆ ಚುನಾವಣೆಯ ಮೂಲಕ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ಮುಖಂಡರು ಹೇಳಿದರು.

ಶಾಂತಪ್ಪ ಕೂಡಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಅಂಬಿಗರ ಚೌಡಯ್ಯ ಯುವಕ ಸಂಘದ ಪದಾಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೂಡಿ, ಉಪಾಧ್ಯಕ್ಷ ರವಿ ಬೊಮ್ಮನಹಳ್ಳಿ, ಶರಣು ಮೇಲ್ಕುಂದಿ, ಪಿರು ಪೂಜಾರಿ, ಶರಣು, ಮಹೇಶ್, ಸುರೇಶ್ ಕೂಡಿ, ಸಂತು ಹುಳಿಗೇರಿ, ಶಾಮ್ ಕೋಬಾಳ, ಕುಮಾರ್, ಮಣಿಕಂಠ, ಅನಿಲ್ ಕೂಡಿ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.

ನೂತನವಾಗಿ ವಿಕಾಸಶೀಲ ಇನ್ಸಾನ್ ಪಾರ್ಟಿಯ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಶಾಂತಪ್ಪ ಕೂಡಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿವರವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಬಟಗೇರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button