ವಚನ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ
ವಚನ ಸಾಹಿತ್ಯದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ದಾರಿ: ಸಿದ್ಧಲಿಂಗ ಮಹಾಸ್ವಾಮಿಗಳ ಆಶಯ

ಕಲಬುರಗಿ, ಆ.26- ಬಸವಾದಿ ಶರಣರ ಅನುಭವದಿಂದ ತುಂಬಿರುವ ವಚನ ಸಾಹಿತ್ಯವು ನಮ್ಮ ಜೀವನದ ಅಸ್ತಿತ್ವವಾಗಿದೆ. ಪ್ರತಿಯೊಂದು ವಚನವೂ ಜೀವಸತ್ವದಿಂದ ಕೂಡಿದ್ದು, ನುಡಿದಂತೆ ನಡೆದಾಗ ಅವು ವಚನಗಳಾಗಿ ಹುಟ್ಟಿವೆ. ಎಲ್ಲ ಜಾತಿ, ಧರ್ಮಗಳಾಚೆ ನಿಂತು ಎಲ್ಲರನ್ನೂ ಅಪ್ಪಿಕೊಂಡಂತಹ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ ಎಂದು ವಿಭೂತಿಪುರ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ರಚಿಸಿರುವ ಕಲಬುರಗಿ ವಿಭಾಗದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಸುಲಫಲ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ ವತಿಯಿಂದ ನೀಡಲಾದ ಅಧಿಕೃತ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬೆಳಕು ಚೆಲ್ಲುವಂತಹ ವಚನ ಸಾಹಿತ್ಯ ಸಮ್ಮೇಳನವು ನಾಡಿಗೆ ಮಾದರಿಯಾಗಲಿ ಎಂದು ಅವರು ಆಶಿಸಿದರು.
ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ವೈಚಾರಿಕ ಮಾರ್ಗದಲ್ಲಿ ಮುನ್ನಡೆಯುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ವಚನಗಳ ಸಾರವನ್ನು ಹೊಸ ಪೀಳಿಗೆಗೆ ತಲುಪಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.
ಜಾತೀಯತೆ, ಭ್ರಷ್ಟಾಚಾರ, ಮೂಢನಂಬಿಕೆ ಹಾಗೂ ಲಿಂಗ ತಾರತಮ್ಯವನ್ನು ಖಂಡಿಸಿದ ಬಸವಾದಿ ಶರಣರು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ನುಡಿದಂತೆ ನಡೆದುಕೊಂಡವರು. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ದೀನ ದಲಿತರ ಧ್ವನಿಯಾಗಿ ಶರಣರು ನಿಂತಿದ್ದರು ಎಂದು ಅವರು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ. ಗಣಪತಿ ಸಿಂಧೆ, ಸಾಹಿತಿಗಳಾದ ಮುಡುಬಿ ಗುಂಡೇರಾವ್, ಡಾ. ಕೆ.ಎಸ್. ಬಂಧು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



