ಸಾಹಿತ್ಯ

ಕಲಬುರಗಿಯಲ್ಲಿ ನೂರಾರು ಕವಯಿತ್ರಿಯರ ಸಮಾಗಮ: ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆಗೆ ಶಕುಂತಲಾ ಪಾಟೀಲ ಜಾವಳಿ ಆಗ್ರಹ

ಮಹಿಳಾ ಸಾಹಿತ್ಯ, ಕಲೆ ಹಾಗೂ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು: ಪ್ರಥಮ ಜಿಲ್ಲಾ ಕಾವ್ಯ ಮಹಿಳಾ ಸಮ್ಮೇಳನದಲ್ಲಿ ಒತ್ತಾಯ

ಕಲಬುರಗಿ, ಆ.17: ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠಗಳನ್ನು ಆರಂಭಿಸಬೇಕು. ಜನಪದ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಲಾವಿದರು ಹಾಗೂ ಸಂಗೀತಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಆಗ್ರಹಿಸಿದರು.

ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಿಂಬೆವ್ವ ಪದಶೆಟ್ಟಿ ವೇದಿಕೆಯಡಿ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲೆಯ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ 371(ಜೆ) ಕಲಂ ಅನ್ವಯ ಮಹಿಳೆಯರಿಗೆ ವಿಶೇಷ ನೇಮಕಾತಿ ಅವಕಾಶ ಕಲ್ಪಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಿಗೆ ಮಹಿಳಾ ಹಿರಿಯ ಸಾಹಿತಿಯರ ಹೆಸರುಗಳನ್ನು ಇಡಬೇಕು ಎಂದು ಅವರು ಒತ್ತಾಯಿಸಿದರು.

ಯಾವುದೇ ಸಮಾಜದ ಪ್ರಗತಿಗೆ ಸ್ತ್ರೀವಾದಿ ಸಾಹಿತ್ಯ ಪೂರಕವಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆ ಇಲ್ಲ. ಅವರ ಸಂವೇದನಾಶೀಲ ಬರಹಗಳು ಹಾಗೂ ಅಧ್ಯಯನಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿವೆ. ಆದರೆ ಮಹಿಳಾ ಸಾಹಿತಿಗಳಿಗೆ ಸೂಕ್ತ ವೇದಿಕೆ ಹಾಗೂ ಅಕಾಡೆಮಿಗಳಲ್ಲಿ ಸ್ಥಾನಮಾನ ದೊರೆಯುತ್ತಿಲ್ಲ. ಹಾಳಾಗುತ್ತಿರುವ ಮಹಿಳಾ ವಚನಕಾರ್ತಿಯರ ಸ್ಮಾರಕಗಳು ಹಾಗೂ ದೇವಾಲಯಗಳ ಸಂರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಕುಂತಲಾ ಪಾಟೀಲ ಜಾವಳಿ ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ, ಕಾವ್ಯ ಪರಂಪರೆ ಅತ್ಯಂತ ವಿಶಾಲವಾಗಿದೆ. ಕಾವ್ಯ ತನ್ನ ರಸಾನುಭವವನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಂಗೀತದ ಸಂಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಸಮೃದ್ಧ ಸಂಗೀತ ಪರಂಪರೆ ಇದ್ದು, ಅನೇಕ ವಿದ್ವಾಂಸರು ಮತ್ತು ಕಲಾವಿದರು ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಧ್ವನಿಗೆ ಗೌರವ ನೀಡುವುದು ಹಾಗೂ ಅವರನ್ನು ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ. ಕನ್ನಡ ನಾಡು-ನುಡಿ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸಬೇಕು ಎಂದರು. ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ನೋಡದೆ, ಅವರ ಸಾಮರ್ಥ್ಯವನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಅವರು ‘ಶಕ್ತಿ ಸಿಂಚನ’ ಕೃತಿಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳು, ಕವಯಿತ್ರಿಯರು ಹಾಗೂ ಕಲಾವಿದರು ಭಾಗವಹಿಸಿದ್ದರು.

ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತೆ ಶೀಲಾ ಪಿ. ತಿವಾರಿ, ಡಾ. ಗಂಗಾ ಪೂಜಾರಿ, ಡಾ. ನಿರ್ಮಲಾ ಸಿ. ಕೆಳಮನಿ, ಪದ್ಮಿನಿ ಕಿರಣಗಿ, ಡಾ. ಶರಣಮ್ಮ ಬಿ. ಪಾಟೀಲ, ರಾಜೇಶ್ವರಿ ಸಾಹು, ಭವಾನಿ ಕಾಡೂರ್, ಮಾಲಾ ಕಮಲಾಪುರ ಹಾಗೂ ಶಿಲ್ಪಾ ದಾಸ ಅವರನ್ನು ‘ವಾತ್ಸಲ್ಯ ಕಾವ್ಯ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

‘ಮರಳಿ ಅರಳುವ ಪರಿ’ ವಿಶೇಷ ಗೋಷ್ಠಿಯಲ್ಲಿ ಮಹಿಳೆ ಮತ್ತು ಮೂಢನಂಬಿಕೆ ಕುರಿತು ಡಾ. ಶಿವಲೀಲಾ ಚಟ್ನಳ್ಳಿ ಹಾಗೂ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಡಾ. ಪ್ರಭಾವತಿ ಚಿತಕೋಟೆ, ಪೂಜಾ ಬಂಕಲಗಿ ಮಾತನಾಡಿದರು. ಲೇಖಕಿ ರೂಪಾದೇವಿ ಬಂಗಾರ ಅಧ್ಯಕ್ಷತೆ ವಹಿಸಿದ್ದರು.

ಡಾ. ಕರುಣಾ ಜಮದರ್‌ಖಾನಿ ಅಧ್ಯಕ್ಷತೆಯಲ್ಲಿ ನಡೆದ **‘ಶಕ್ತಿ ಕವಿಗೋಷ್ಠಿ’**ಯಲ್ಲಿ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ನೂರಾರು ಕವಿ-ಕಲಾವಿದರು ಹಾಗೂ ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸಿ ಸಾಹಿತ್ಯದ ಸಂಭ್ರಮಕ್ಕೆ ಸಾಕ್ಷಿಯಾದರು.

ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಸಮಾರೋಪ ನುಡಿಗಳನ್ನಾಡಿದರು. ಸಮ್ಮೇಳನದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಡೊಳ್ಳು, ಕೋಲಾಟ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನ ಜನರ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಕವಯಿತ್ರಿಯರು, ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button