
ಕಲಬುರಗಿ, ಆ.17: ಮಹಾದಾಸೋಹಿ ಶರಣಬಸವೇಶ್ವರರು ಸಕಲ ಜೀವಾತ್ಮರಿಗೂ ದಾಸೋಹಗೈದ ಮಹಾನ್ ಸಂತರು. ಅವರ ಪರಂಪರೆಯನ್ನು ಮುಂದುವರಿಸಿದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ದಾಸೋಹವನ್ನು ಕೇವಲ ಅನ್ನದಾನಕ್ಕೆ ಸೀಮಿತಗೊಳಿಸದೆ ಶಿಕ್ಷಣ, ಜ್ಞಾನ, ಸೇವೆ ಹಾಗೂ ಮಾನವೀಯತೆಯ ವಿಶಾಲ ತತ್ವವಾಗಿ ರೂಪಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕಲ್ಯಾಣರಾವ್ ಜಿ. ಪಾಟೀಲ್ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಹಾಗೂ ಶರಣಬಸವೇಶ್ವರ ದೇವಸ್ಥಾನದ ವತಿಯಿಂದ ಭಾನುವಾರ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ದಾಸೋಹ ಧರ್ಮ’ ವಿಷಯ ಕುರಿತು ಅವರು ಮಾತನಾಡಿದರು.
ಡಾ. ಶರಣಬಸವಪ್ಪ ಅಪ್ಪ ಅವರ ದೃಷ್ಟಿಯಲ್ಲಿ ದಾಸೋಹವೆಂದರೆ ಕೇವಲ ಹಸಿದವರಿಗೆ ಆಹಾರ ನೀಡುವುದಲ್ಲ. ಮನುಷ್ಯನ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಸೇವೆಯನ್ನು ಮಾಡುವುದು ಕೂಡ ದಾಸೋಹದ ಒಂದು ರೂಪವಾಗಿದೆ ಎಂದು ಅವರು ವಿವರಿಸಿದರು.
ಶರಣಬಸವೇಶ್ವರ ಪರಂಪರೆಯಲ್ಲಿ ಅನ್ನದಾಸೋಹಕ್ಕೆ ವಿಶೇಷ ಸ್ಥಾನವಿದೆ. ಹಸಿದವರಿಗೆ ಅನ್ನ ನೀಡುವುದು ಮಾನವೀಯ ಸೇವೆಯ ಅತ್ಯಂತ ಮೂಲಭೂತ ರೂಪವಾಗಿದೆ. ಈ ಪರಂಪರೆಯ ಮುಂದುವರಿಕೆಯಾಗಿ ದಾಸೋಹ ಮಹಾಮನೆಯ ಸೇವಾ ಪರಿಕಲ್ಪನೆ ಬೆಳೆದಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲಿಯೂ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹದ ಪರಂಪರೆ ಮುಂದುವರಿದಿದೆ ಎಂದು ತಿಳಿಸಿದರು.
ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ಧರ್ಮದ ಪ್ರಮುಖ ಆಯಾಮಗಳಲ್ಲಿ ಶಿಕ್ಷಣ ದಾಸೋಹವೂ ಒಂದಾಗಿದೆ. ಅವರ ಚಿಂತನೆಯಂತೆ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಶಕ್ತಿಯಾಗಿದೆ ಎಂದು ಡಾ. ಪಾಟೀಲ್ ಹೇಳಿದರು.
ಪೂಜ್ಯರು ‘ಸರ್ವದಲೇ ದಾಸೋಹ’ ಎಂಬ ಆಶಯವನ್ನು ಪ್ರತಿಪಾದಿಸಿದ್ದು, 21 ದಾಸೋಹ ಸೂತ್ರಗಳನ್ನು ರಚಿಸಿ ಸಮಾಜ ಹಾಗೂ ವಿದ್ಯಾರ್ಥಿಗಳಿಗೆ ಅವುಗಳ ಕುರಿತು ತಿಳಿಸಿಕೊಡುವ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳದೆ ಇತರರೊಂದಿಗೆ ಹಂಚಿಕೊಳ್ಳುವುದು ಜ್ಞಾನ ದಾಸೋಹವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದು ಹಾಗೂ ವಿದ್ಯಾರ್ಥಿಗಳು ತಾವು ಪಡೆದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವುದು ಕೂಡ ದಾಸೋಹದ ರೂಪಗಳಾಗಿವೆ ಎಂದು ಅವರು ವಿವರಿಸಿದರು.
ಒಟ್ಟಿನಲ್ಲಿ, ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ಧರ್ಮವು ಅನ್ನದಾಸೋಹದಿಂದ ಜ್ಞಾನ ದಾಸೋಹದವರೆಗೆ, ವೈಯಕ್ತಿಕ ಸೇವೆಯಿಂದ ಸಾಮಾಜಿಕ ಪರಿವರ್ತನೆಯವರೆಗೆ ವಿಸ್ತರಿಸಿರುವ ಮಾನವೀಯ ಜೀವನದರ್ಶನವಾಗಿದೆ ಎಂದು ಡಾ. ಕಲ್ಯಾಣರಾವ್ ಪಾಟೀಲ್ ಅಭಿಪ್ರಾಯಪಟ್ಟರು.



