ಕಲೆಸಾಂಸ್ಕೃತಿಕ

ದಾನಯ್ಯ ಚೌಕಿಮಠ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ: ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸಲು ಕಲಾವಿದರಿಗೆ ಕರೆ

ಸಮಕಾಲೀನ ಕಲಾಕೃತಿಗಳ ಮೂಲಕ ಜನಸಾಮಾನ್ಯರಲ್ಲಿ ಕಲಾಸಕ್ತಿಯನ್ನು ಬೆಳೆಸುವ ಅಗತ್ಯ: ಡಾ. ಶಿವಾನಂದ ಬಂಟನೂರು

ಕಲಬುರಗಿ, ಆ.15: ಕಲೆಗಳು ಪ್ರಾಚೀನ ಕಾಲದಿಂದ ಇಂದಿನವರೆಗೂ ಅನೇಕ ಸ್ಥಿತ್ಯಂತರಗಳನ್ನು ಕಂಡಿದ್ದು, ಸಮಕಾಲೀನ ಹಾಗೂ ವೈಚಾರಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಕಲಾವಿದರ ಮೇಲಿದೆ ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದಲ್ಲಿ ದಿ ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ವತಿಯಿಂದ ನಗರದ ಆನಂದ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಬಾಗಲಕೋಟೆಯ ಶಿಲ್ಪಕಲಾವಿದ ದಾನಯ್ಯ ಎಸ್. ಚೌಕಿಮಠ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪಿ, ಬೇಲೂರು ಹಾಗೂ ಹಳೇಬೀಡು ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳಲ್ಲಿರುವ ಸಾಂಪ್ರದಾಯಿಕ ಶಿಲ್ಪಕಲಾಕೃತಿಗಳನ್ನು ನೋಡಿದ ಅನುಭವ ಹೊಂದಿರುವ ಜನಸಾಮಾನ್ಯರಿಗೆ ಆಧುನಿಕ ಶಿಲ್ಪಕಲೆಯನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಆದ್ದರಿಂದ ಸಮಕಾಲೀನ ಶಿಲ್ಪಕಲಾ ಪ್ರದರ್ಶನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿ, ಜನರು ನಿರಂತರವಾಗಿ ಇಂತಹ ಕಲಾಕೃತಿಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದರು.

ಇದರಿಂದ ಜನಸಾಮಾನ್ಯರು ಮತ್ತು ನವ್ಯ ಕಲಾಕೃತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಹಾಗೂ ಅರಿವು ಮೂಡಿಸುವ ಮೂಲಕ ಹೊಸ ತಲೆಮಾರಿನ ಕಲಾಕೃತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಬೇಕು ಎಂದು ಡಾ. ಶಿವಾನಂದ ಬಂಟನೂರು ಕರೆ ನೀಡಿದರು.

ಹಿರಿಯ ಶಿಲ್ಪಕಲಾವಿದ ಈರಣ್ಣ ಕಂಬಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯುವ ಕಲಾವಿದ ದಾನಯ್ಯ ಚೌಕಿಮಠ ಅವರು ಶಿಲ್ಪಕಲೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ಹಾಗೂ ಬಾಗಲಕೋಟೆ ಭಾಗಗಳಲ್ಲಿ ದೊರೆಯುವ ಕಲ್ಲುಗಳನ್ನು ಬಳಸಿಕೊಂಡು ಆಧುನಿಕ ಶೈಲಿಯ ಶಿಲ್ಪಗಳನ್ನು ರಚಿಸಿರುವ ಅವರು, ಸಮಕಾಲೀನ ಶಿಲ್ಪಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ ಎಂದು ಹೇಳಿದರು.

ಹಿರಿಯ ಚಿತ್ರಕಲಾವಿದ ಹಾಗೂ ದಿ ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ. ವಿ.ಜಿ. ಅಂದಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಯ್ಯ ಅವರು ಪ್ರತಿಭಾವಂತ ಸಮಕಾಲೀನ ಶಿಲ್ಪಕಲಾವಿದರಾಗಿದ್ದು, ಅವರ ಕಲಾಕೃತಿಗಳಲ್ಲಿ ಸೃಜನಶೀಲ ಸಾಮರ್ಥ್ಯ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. ಅವರು ಕಲ್ಲು ಮಾಧ್ಯಮದಲ್ಲಿ ಸೃಷ್ಟಿಸಿರುವ ವಿವಿಧ ಶಿಲ್ಪಗಳು ಆಕರ್ಷಕವಾಗಿದ್ದು, ಕಲಾಸಕ್ತರನ್ನು ಸೆಳೆಯುತ್ತಿವೆ ಎಂದು ಹೇಳಿದರು.

ಯುವ ಶಿಲ್ಪಕಲಾವಿದ ದಾನಯ್ಯ ಎಸ್. ಚೌಕಿಮಠ ಮಾತನಾಡಿ, ತಮ್ಮ ಶಿಲ್ಪಕಲಾ ಪ್ರಯಾಣಕ್ಕೆ ಪ್ರೋತ್ಸಾಹ ನೀಡಿದ ಹಿರಿಯ ಕಲಾವಿದರು ಹಾಗೂ ಕಲಾಸಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರದರ್ಶನದಲ್ಲಿ ಸಮಕಾಲೀನ ಚಿಂತನೆಗಳು, ಸೃಜನಶೀಲತೆ ಹಾಗೂ ಆಧುನಿಕ ಶಿಲ್ಪ ತಂತ್ರಗಳನ್ನು ಪ್ರತಿಬಿಂಬಿಸುವ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಲಾವಿದರಾದ ವಿ.ಬಿ. ಬಿರಾದಾರ್, ಬಾಬುರಾವ್ ಎಚ್., ಡಾ. ಎಚ್.ವಿ. ಮಂತಟ್ಟಿ, ಚಂದ್ರಹಾಸ ಜಾಲಿಹಾಳ್, ಗೌತಮ್ ಅಂದಾನಿ, ನಿಂಗಣ್ಣ ಡಿ. ಕೇರಿ, ಡಾ. ಪರಶುರಾಮ್ ಪಿ., ಡಾ. ಕೆ.ಎಂ. ಕುಮಾರಸ್ವಾಮಿ, ಶಂಕರ ಹೊಡ್ಡಿನಮನಿ, ಗಿರೀಶ್ ಕುಲಕರ್ಣಿ, ರಾಮಗಿರಿ ಪೊಲೀಸ್ ಪಾಟೀಲ್, ಡಿ.ಎಸ್. ದೇಸಾಯಿ, ಗುರುಲಿಂಗ ಅರಳಿ, ಸಂಗಮೇಶ್ ಚಿಲಶೆಟ್ಟಿ, ಶ್ರೀಶೈಲ ಪಾಟೀಲ್, ಕವಿತಾ ಕಟ್ಟೆ, ಜಲಜಾಕ್ಷಿ ಕುಲಕರ್ಣಿ, ನೀಲಾಂಬಿಕ ಹಿರೇಮಠ, ವಿಜಯ್ ಅವರಾದ್ ಹಾಗೂ ಸುರೇಶ್ ಸಿ.ಎಂ. ಸೇರಿದಂತೆ ಕಲಾ ವಿದ್ಯಾರ್ಥಿಗಳು ಮತ್ತು ಕಲಾಸಕ್ತರು ಭಾಗವಹಿಸಿದ್ದರು.

ಪ್ರಶಾಂತ್ ಗುಂಬಳಾಪುರ ಮಠ ಅವರು ಸ್ವಾಗತಿಸಿದರು. ಪ್ರಶಾಂತ್ ಗೋಲ್ಡ್‌ಸ್ಮಿತ್ ಅವರು ಕೊಳಲು ವಾದನದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಲಾವಿದ ಅಮೀನರೆಡ್ಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button