
ಕಲಬುರಗಿ, ಆ.14: ಗ್ರಂಥಾಲಯಗಳು ಜ್ಞಾನದ ಭಂಡಾರವಾಗಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಪರಶುರಾಮ್ ಕಟ್ಟಿಮನಿ ಹೇಳಿದರು.
ನಗರದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ್ ಅವರ 134ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಡಾ. ರಂಗನಾಥ್ ಅವರ ಜೀವನ ಪಯಣ, ಗ್ರಂಥಾಲಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಹಾಗೂ ಗ್ರಂಥಾಲಯದ ಪಂಚಸೂತ್ರಗಳ ಕುರಿತು ವಿವರಿಸಿದರು.
ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸಿಡುವ ಸ್ಥಳವಾಗಿರದೆ, ಜ್ಞಾನವನ್ನು ಸಂಪಾದಿಸುವ ಹಾಗೂ ಹಂಚಿಕೊಳ್ಳುವ ಪ್ರಮುಖ ಕೇಂದ್ರವಾಗಬೇಕು. ಕಾಲಕ್ಕೆ ತಕ್ಕಂತೆ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಗತ್ಯವಾದ ಜ್ಞಾನ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಸಮಕುಲಪತಿ ಡಾ. ಅಷ್ಪಾಕ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯವೆಂದರೆ ಕೇವಲ ಕಾಗದ ಹಾಗೂ ಪುಸ್ತಕಗಳಿಂದ ತುಂಬಿರುವ ಕೊಠಡಿಯಲ್ಲ. ಮೊಬೈಲ್ನಲ್ಲಿ ಸಮಯ ವ್ಯರ್ಥ ಮಾಡುವ ಬದಲು ಪುಸ್ತಕ ಓದುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ವಿಭಾಗದ ಡೀನ್ ಡಾ. ಗುರುಪ್ರಸಾದ್ ಅವರು ಪುಸ್ತಕ ಓದುವ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಖಾಜಿ ಅನ್ಸಾರಿ ಪ್ರಾರ್ಥಿಸಿದರು. ಗ್ರಂಥಪಾಲಕ ಡಾ. ಸಮರ್ಥ ಸ್ವಾಗತಿಸಿದರು. ಡಾ. ಮೊಹಮ್ಮದ್ ಯೂನುಸ್ ಅಲಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ವಿನುತಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡೀನ್ಗಳಾದ ಡಾ. ಇಕ್ಬಾಲ್ ಮಟ್ಟು, ಡಾ. ಶ್ರೀನಿವಾಸ, ಸಹಾಯಕ ಡೀನ್ ಡಾ. ಮಾರೋಫ್, ಡಾ. ಸಿದ್ದೇಶ್ ಸಿರವಾರ್, ಡಾ. ಬಿಲಾಲ್ ಸೇರಿದಂತೆ ಭಾಷಾ, ಕಲಾ ಹಾಗೂ ವಿಜ್ಞಾನ ನಿಕಾಯದ ಉಪನ್ಯಾಸಕರು ಉಪಸ್ಥಿತರಿದ್ದರು.



