ಜಿಲ್ಲಾಸುದ್ದಿಸಾಂಸ್ಕೃತಿಕ

“ಗಾಣಗಾಪುರದ ನರಸಿಂಹ ತೀರ್ಥದಲ್ಲಿ ಶ್ರಮದಾನ: 800 ಕೆ.ಜಿ. ತ್ಯಾಜ್ಯ ಸಂಗ್ರಹ”

ಕಲಬುರಗಿ, ಅ. 2: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದಡಿ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ನರಸಿಂಹ ತೀರ್ಥ ಪ್ರದೇಶದಲ್ಲಿ ಸತ್ಸಂಗ್ ಫೌಂಡೇಷನ್‌ನ ಸ್ವಯಂಸೇವಕರು ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಗುರುವಾರ ಶ್ರಮದಾನ ನಡೆಸಿದರು.

ಸತ್ಸಂಗ್ ಫೌಂಡೇಷನ್‌ನ ಸ್ವಯಂಸೇವಕರು ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಸೇರಿ ನರಸಿಂಹ ತೀರ್ಥ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಯತಿರಾಜ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಹ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಈ ಸಂದರ್ಭದಲ್ಲಿ ಸುಮಾರು 700ರಿಂದ 800 ಕೆ.ಜಿ. ಘನ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಸತ್ಸಂಗ್ ಫೌಂಡೇಷನ್ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಆಡಳಿತ ಮಂಡಳಿ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನಕ್ಕೆ ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಚಾಲನೆ ನೀಡಿದರು.‘ಸ್ವಚ್ಛತೆ ನೆಲದ ಭವ್ಯತೆಯನ್ನು ಸಾರುತ್ತದೆ. ಮಕ್ಕಳಲ್ಲಿ, ಯುವಜನರಲ್ಲಿ ಹಾಗೂ ಸಮುದಾಯದ ಜನರಲ್ಲಿ ಪರಿಸರದ ಜವಾಬ್ದಾರಿ, ಸ್ವಚ್ಛತೆ ಮತ್ತು ಸಮಾಜಸೇವೆಯ ಮನೋಭಾವ ಬೆಳೆಸಬೇಕು’ ಎಂದು ಅವರು ಹೇಳಿದರು.

ಗಾಣಗಾಪುರ ಸಂಗಮ ಕ್ಷೇತ್ರದ ಪಾವಿತ್ರ್ಯ ಕಾಪಾಡಲು ನದಿ ಪಾತ್ರದಲ್ಲಿ ಕಡ್ಡಾಯವಾಗಿ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುಕ್ತ ಬಹಿರ್ದೆಸೆಗೆ ಹೋಗದೆ ಶೌಚಾಲಯ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸತ್ಸಂಗ್ ಫೌಂಡೇಷನ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ಇಂತಹ ಚಟುವಟಿಕೆಗಳು ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.ಗಾಣಗಾಪುರ ದೇವಸ್ಥಾನದ ನೋಡಲ್ ಅಧಿಕಾರಿ ಹಾಗೂ ಐಎಎಸ್ ಪ್ರೊಬೇಷನರ್ ಶಿಖರ್ ಮೊಘಾ ಮಾತನಾಡಿ, ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿರುವುದನ್ನು ಶ್ಲಾಘಿಸಿದರು.

ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು ಹಾಗೂ ಜೈವಿಕವಾಗಿ ವಿಘಟಿಸಬಹುದಾದ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.ಶ್ರಮದಾನದಲ್ಲಿ ಸತ್ಸಂಗ್ ಫೌಂಡೇಷನ್‌ನ ಸ್ವಯಂಸೇವಕರು, ಗಾಣಗಾಪುರ ಪಿಡಿಒ ಅನುಸೂಯಾ, ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿ, ಯತಿರಾಜ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button