ಸನ್ನತಿ, ಕಲಬುರಗಿ ಕೋಟೆ ಅಭಿವೃದ್ಧಿಗೆ ಎಎಸ್‌ಐ ಜತೆ ಸಂಸದ ರಾಧಾಕೃಷ್ಣ ಚರ್ಚೆ
ಐತಿಹಾಸಿಕ ತಾಣಗಳ ಸಂರಕ್ಷಣೆ, ಜೀರ್ಣೋದ್ಧಾರ ಹಾಗೂ ಸಮಗ್ರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ

ನವದೆಹಲಿಯಿಂದ, ಆ.14: ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಗುರುವಾರ ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಪ್ರಧಾನ ಕಚೇರಿಗೆ ಭೇಟಿ ನೀಡಿ ಎಎಸ್‌ಐ ಮಹಾನಿರ್ದೇಶಕ ಯದುವೀರ್ ಸಿಂಗ್ ರಾವತ್ ಹಾಗೂ ಹೆಚ್ಚುವರಿ ಮಹಾನಿರ್ದೇಶಕ (ಸಂರಕ್ಷಣೆ) ಶ್ರೀ ಜಾನ್ವೀಜ್ ಶರ್ಮಾ ಅವರನ್ನು ಭೇಟಿಯಾಗಿ ಕಲಬುರಗಿ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಐತಿಹಾಸಿಕ ಬೌದ್ಧ ತಾಣವಾದ ಸನ್ನತಿ ಹಾಗೂ ಪ್ರಸಿದ್ಧ ಕಲಬುರಗಿ ಕೋಟೆಯ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಸಮಗ್ರ ಅಭಿವೃದ್ಧಿ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಕಲಬುರಗಿ ಜಿಲ್ಲೆ ಅಪಾರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಇಲ್ಲಿನ ಪಾರಂಪರಿಕ ತಾಣಗಳನ್ನು ಕಾಲಮಿತಿಯಲ್ಲಿ ಸಂರಕ್ಷಿಸುವುದು ಹಾಗೂ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಎಎಸ್‌ಐ ಅಧಿಕಾರಿಗಳ ಗಮನಕ್ಕೆ ತಂದರು.
ವಿಶೇಷವಾಗಿ ಸನ್ನತಿ ಬೌದ್ಧ ತಾಣ ಹಾಗೂ ಕಲಬುರಗಿ ಕೋಟೆಯ ಸಂರಕ್ಷಣೆಗೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಂಡು, ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಂಸದರು ಪ್ರಸ್ತಾಪಿಸಿದ ವಿಷಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಎಸ್‌ಐ ಹಿರಿಯ ಅಧಿಕಾರಿಗಳು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಲಬುರಗಿಯ ಶ್ರೀಮಂತ ಪುರಾತತ್ವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದರ ಜೊತೆಗೆ, ದೇಶದಾದ್ಯಂತ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಹೆಜ್ಜೆಯಾಗಿದೆ.



