ಶಿಕ್ಷಣ

ನಕಲು ದಂಧೆಯ ನರ್ಸಿಂಗ್ ಕಾಲೇಜುಗಳ ಮಾನ್ಯತೆ ರದ್ದತಿಗೆ ಆಗ್ರಹ

ಮೂಲಸೌಕರ್ಯ, ಆಸ್ಪತ್ರೆ ಹಾಗೂ ಬೋಧನಾ ಸಿಬ್ಬಂದಿ ಇಲ್ಲದ ಕಾಲೇಜುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹುಚ್ಚೇಶ್ವರ ವಠಾರ್ ಒತ್ತಾಯ

ಕಲಬುರಗಿ, ಆ.14: ಜಿಲ್ಲೆಯಲ್ಲಿ ಅಗತ್ಯ ಮೂಲಸೌಕರ್ಯ, ಆಸ್ಪತ್ರೆ ಹಾಗೂ ಬೋಧನಾ ಸಿಬ್ಬಂದಿ ಇಲ್ಲದೆ ಕೇವಲ ನಕಲು ದಂಧೆಗಾಗಿ ಕಾನೂನುಬಾಹಿರವಾಗಿ ನಡೆಯುತ್ತಿರುವ ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಿ, ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಬಿಎಸ್‌ಪಿ ಮುಖಂಡ ಹುಚ್ಚೇಶ್ವರ ವಠಾರ್ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಭಾರತೀಯ ನರ್ಸಿಂಗ್ ಕೌನ್ಸಿಲ್ ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿರುವ ಕೆಲವು ಜಿಎನ್‌ಎಂ, ಪ್ಯಾರಾ ಮೆಡಿಕಲ್ ಹಾಗೂ ಬಿಎಸ್ಸಿ ನರ್ಸಿಂಗ್ ಕಾಲೇಜುಗಳಲ್ಲಿ ಗಂಭೀರ ಅವ್ಯವಸ್ಥೆ ಮತ್ತು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ನರ್ಸಿಂಗ್ ಕೌನ್ಸಿಲ್ ನಿಯಮಗಳ ಪ್ರಕಾರ ಪ್ರತಿಯೊಂದು ನರ್ಸಿಂಗ್ ಕಾಲೇಜು ಕಡ್ಡಾಯವಾಗಿ ಸ್ವಂತ ಆಸ್ಪತ್ರೆ ಅಥವಾ ನಿಗದಿತ ಹಾಸಿಗೆಗಳಿರುವ ಸಂಯೋಜಿತ ಆಸ್ಪತ್ರೆ, ಸುಸಜ್ಜಿತ ಸ್ವಂತ ಕಟ್ಟಡ, ಬೋಧನಾ ಕೊಠಡಿಗಳು, ಪ್ರಯೋಗಾಲಯಗಳು ಹಾಗೂ ಅರ್ಹ ಬೋಧನಾ ಸಿಬ್ಬಂದಿಯನ್ನು ಹೊಂದಿರಬೇಕು. ಆದರೆ ಜಿಲ್ಲೆಯ ಹಲವು ಸಂಸ್ಥೆಗಳು ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಅವರು ದೂರಿದ್ದಾರೆ.

ಹಲವು ಕಾಲೇಜುಗಳಲ್ಲಿ ಯಾವುದೇ ಬೋಧನಾ ಸಿಬ್ಬಂದಿ ಇಲ್ಲದಿರುವುದು, ಸಮರ್ಪಕ ತರಗತಿಗಳು ನಡೆಯದಿರುವುದು ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ನೀಡಬೇಕಾದ ಪ್ರಾಯೋಗಿಕ ತರಬೇತಿಯೂ ಇಲ್ಲದಿರುವುದು ಕಂಡುಬರುತ್ತಿದೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಹೊರರಾಜ್ಯ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ನೇರವಾಗಿ ಪರೀಕ್ಷೆ ಬರೆಯಿಸುವ ಮೂಲಕ ನಕಲು ದಂಧೆ ನಡೆಸಲಾಗುತ್ತಿದೆ ಎಂದು ಹುಚ್ಚೇಶ್ವರ ವಠಾರ್ ಆರೋಪಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿಯೇ ವ್ಯವಸ್ಥಿತವಾಗಿ ನಕಲು ಮಾಡಲು ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ದಂಧೆ ನಿರಂತರವಾಗಿ ನಡೆಯುತ್ತಿದೆ. ಇಂತಹ ಅಕ್ರಮಗಳಿಂದ ನರ್ಸಿಂಗ್ ಶಿಕ್ಷಣದ ಗುಣಮಟ್ಟ ಕುಸಿಯುವುದಲ್ಲದೆ, ಸಮರ್ಪಕ ತರಬೇತಿ ಪಡೆಯದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಮೂಲಸೌಕರ್ಯವೂ ಇಲ್ಲದ ಇಂತಹ ಕಾಲೇಜುಗಳು ಮತ್ತು ಕಟ್ಟಡಗಳಿಗೆ ಸೂಕ್ತ ಪರಿಶೀಲನೆ ನಡೆಸದೆ ಅನುಮತಿ ಹಾಗೂ ಮಾನ್ಯತೆ ನೀಡಿರುವ ನರ್ಸಿಂಗ್ ಕೌನ್ಸಿಲ್ ಮತ್ತು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಅನುಮಾನಾಸ್ಪದವಾಗಿದೆ ಎಂದು ಅವರು ದೂರಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಇಂತಹ ಅಕ್ರಮಗಳು ಬಹಿರಂಗವಾಗಿ ನಡೆಯುತ್ತಿರುವುದು ಇಡೀ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ನಕಲಿ ಕಾಲೇಜುಗಳಿಂದ ಉತ್ತೀರ್ಣರಾಗಿ ಹೊರಬರುವ ನರ್ಸ್‌ಗಳಿಂದ ಭವಿಷ್ಯದಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಎಲ್ಲ ನರ್ಸಿಂಗ್ ಕಾಲೇಜುಗಳ ಮೇಲೆ ಇಲಾಖೆಯಿಂದ ಹಠಾತ್ ದಾಳಿ ಹಾಗೂ ಜಂಟಿ ತಪಾಸಣೆ ನಡೆಸಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿರುವ ಎಲ್ಲ ಕಾಲೇಜುಗಳ ಮಾನ್ಯತೆಯನ್ನು ತಕ್ಷಣ ರದ್ದುಪಡಿಸಬೇಕು. ವಿದ್ಯಾರ್ಥಿಗಳನ್ನು ವಂಚಿಸಿ ನಕಲು ದಂಧೆ ನಡೆಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿರುವ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾವುದೇ ಮೂಲಸೌಕರ್ಯವಿಲ್ಲದಿದ್ದರೂ ನಿಯಮಬಾಹಿರವಾಗಿ ಕಾಲೇಜುಗಳಿಗೆ ಅನುಮತಿ ನೀಡಿದ ತಪಾಸಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧವೂ ಇಲಾಖಾ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಹಿತ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಗಂಭೀರ ವಿಷಯವನ್ನು ಸರ್ಕಾರ ಕೂಡಲೇ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹುಚ್ಚೇಶ್ವರ ವಠಾರ್ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button